ಬಿಎಲ್ ಓ-ಬಿಎಲ್ ಎಗಳು ಸಮನ್ವಯದಿಂದ ಕೆಲಸ ಮಾಡಲಿ ಜಿಲ್ಲಾಧಿಕಾರಿಗಳಾದ ಸುರೇಶ ಬಿ. ಇಟ್ನಾಳ ಸಲಹೆ…

ಬೂತ್ ಲೆವೆಲ್ ಏಜೆಂಟ್ (BLA) ಕಾರ್ಯಾಗಾರ ಉದ್ಘಾಟನೆ…

*ಗಂಗಾವತಿ* : ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಬಿಎಲ್ ಓಗಳು ಹಾಗೂ ಬಿಎಲ್ ಎಗಳು ಸಮನ್ವಯದಿಂದ ಕೆಲಸ ಮಾಡಿದರೇ ಅರ್ಹ ಮತದಾರರು ಮತದಾರ ಪಟ್ಟಿಯಿಂದ ಹೊರಗುಳಿಯುವುದನ್ನು ತಪ್ಪಿಸಬಹುದು ಎಂದು ಜಿಲ್ಲಾಧಿಕಾರಿಗಳಾದ ಸುರೇಶ ಬಿ. ಇಟ್ನಾಳ ಅವರು ಹೇಳಿದರು.ನಗರದ ಶ್ರೀ ಇಂಟರ್ ನ್ಯಾಶನಲ್ ಇನ್ಸಕ್ಷನ್ ಹಾಲ್ ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗಂಗಾವತಿ ವಿದಾನಸಭಾ ಕ್ಷೇತ್ರ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ 2026 ರ ಬೂತ್ ಲೆವೆಲ್ ಏಜೆಂಟ್ (BLA) ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಕೊಪ್ಪಳ ಜಿಲ್ಲೆಯಲ್ಲಿ ಎಸ್ ಐಆರ್ ಮ್ಯಾಂಪಿಂಗ್ ನಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಪ್ರಗತಿ ಕಡಿಮೆ ಇದೆ. ಗಂಗಾವತಿ ಕ್ಷೇತ್ರದಲ್ಲಿ 94 % ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದ್ದು, ಇನ್ನೂ ಬಾಕಿ 10 ಸಾವಿರ ಮತದಾರರ ಮ್ಯಾಪಿಂಗ್ ಮಾಡುವುದು ಬಾಕಿ ಇರುತ್ತದೆ. ಇದು ಸವಾಲಿನ ಕೆಲಸವಾಗಿದ್ದು, ಬಿಎಲ್ ಓಗಳು ಹಾಗೂ ಬಿಎಲ್ ಎ ಗಳು ಜೊತೆಗೂಡಿ ಶೇ.100 ರಷ್ಟು ಪ್ರಗತಿ ಸಾಧಿಸಬೇಕು ಎಂದು ಸೂಚನೆ ನೀಡಿದರು. 2022 ಮತ್ತು 2025ರ ಮತದಾರರ ಪಟ್ಟಿಯ ಹೆಸರಲ್ಲಿ ವ್ಯತ್ಯಾಸ ಇದ್ದವರು ಹಾಗೂ ಸ್ಥಳಾಂತರವಾದವರು ಗಣತಿ ನೋಂದಣಿ ಅರ್ಜಿ ಸಲ್ಲಿಸಿ ಅಗತ್ಯ ದಾಖಲೆ ನೀಡಿದರೆ ಮತದಾರ ಪಟ್ಟಿಯಲ್ಲಿ ಸೇರಲು ಅವಕಾಶ ಇರುತ್ತದೆ. ಗಣತಿ ನೋಂದಣಿ ಅರ್ಜಿಗೆ ಮತದಾರ ಕುಟುಂಬದವರು ಯಾರಾದರೂ ಸಹಿ ಮಾಡಬಹುದು. ಮ್ಯಾಪಿಂಗ್ ನಲ್ಲಿ ಏನಾದರೂ ತಕರಾರರು ಇದ್ದರೂ ಸಲ್ಲಿಸಲು ಅವಕಾಶವಿದೆ ಎಂದರು.ಒಬ್ಬ ಮತದಾರ ಎರಡು ಕಡೆ ಮತದಾರ ಪಟ್ಟಿಯಲ್ಲಿ ಹೆಸರು ಹೊಂದುವುದು ಶಿಕ್ಷಾರ್ಹ ಅಪರಾಧವಾಗಿದೆ. ಪಟ್ಟಿಯಲ್ಲಿ ನೈಜ ಮತದಾರರ ಹೆಸರು ಕೈ ತಪ್ಪಿಹೋಗದಂತೆ ನೋಡಿಕೊಳ್ಳಬೇಕು. ಅರ್ಹ ಮತದಾರರು ಬಿಟ್ಟುಹೋಗದಂತೆ ಅನರ್ಹ ಮತದಾರರು ಸೇರ್ಪಡೆ ಆಗದಂತೆ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. 10 ಬಿಎಲ್ ಓಗಳಿಗೆ ಒಬ್ಬರು ಮೇಲುಸ್ತುವಾರಿ ಇರುತ್ತಾರೆ. ಈಗಾಗಲೇ ಗಂಗಾವತಿ ನಗರದಲ್ಲಿ 18 ಮತದಾರರ ನೆರವು ಕೇಂದ್ರಗಳು ಹಾಗೂ ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯತ್ ಗೊಂದು ಮತದಾರರ ನೆರವು ಕೇಂದ್ರ ತೆರೆಯಲಾಗಿದೆ. ಮತದಾರರು ಕೇಂದ್ರದ ಲಾಭ ಪಡೆದು ಮಾಹಿತಿ ಪಡೆದುಕೊಳ್ಳಬೇಕು ಎಂದು ಡಿಸಿ ಸುರೇಶ ಬಿ. ಇಟ್ನಾಳ ತಿಳಿಸಿದರು.ಉಪ ವಿಭಾಗಧಿಕಾರಿಗಳಾದ ಮಹೇಶ ಕ್ಯಾಪ್ಟೆನ್ ಅವರು, ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ 2026 ರ ಬೂತ್ ಲೆವೆಲ್ ಏಜೆಂಟ್ (BLA) ಕಾರ್ಯಾಗಾರದಲ್ಲಿ ಎಸ್ ಐಆರ್ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು. ವಿವಿಧ ಪಕ್ಷದ ಬಿಎಲ್ ಎಗಳು ತಮಗೆ ಎಸ್ ಐಆರ್ ಬಗ್ಗೆ ಇರುವ ಅನುಮಾನದ ಪ್ರಶ್ನೆಗಳನ್ನು ಕೇಳಿ ಉತ್ತರ ಕಂಡುಕೊಂಡರು. ಮತದಾರ ಪಟ್ಟಿಯಲ್ಲಿ ಒಂದು ಕುಟುಂಬದ ಮತದಾರರು ಒಂದೇ ಕ್ರಮಸಂಖ್ಯೆಯಲ್ಲಿ ಇರುವಂತೆ ಪಟ್ಟಿ ತಯಾರಿಸುವಂತೆ ಬಿಎಲ್ ಎಗಳು ಕೋರಿದರು.ಜಿಪಂ ಯೋಜನಾ ನಿರ್ದೇಶಕರು ಹಾಗೂ ವಿಧಾನಸಭಾ ಕ್ಷೇತ್ರದ ಮತದಾರ ನೋಂದಣಾಧಿಕಾರಿಗಳಾದ ಶ್ಯಾಮಸುಂದರ್ ಕಾಂಬ್ಳೆ, ತಹಸೀಲ್ದಾರ್ ವಸಂತ ಕುಮಾರಿ ಯು., ತಾಪಂ ಇಓ ರಾಮರೆಡ್ಡಿ ಪಾಟೀಲ್, ನಗರಸಭೆ ಪೌರಾಯುಕ್ತರಾದ ವಿರುಪಾಕ್ಷಮೂರ್ತಿ, ಬಿಇಓ ನಟೇಶ, ಸಿಡಿಪಿಓ ಶಿವಶರಣಪ್ಪ, ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಪಾಟೀಲ್, ತಾಪಂ ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್, ತರಬೇತುದಾರರಾದ ಕುಮಾರಸ್ವಾಮಿ, ಸೋಮಶೇಖರಗೌಡ ಸೇರಿ ಬಿಎಲ್ ಎಗಳು ಇದ್ದರು.

