ಮರಕುಂಬಿ ಗ್ರಾಮದಲ್ಲಿ ಭಾವೈಕ್ಯತೆಯ ಮೊಹರಂ..

ಗಂಗಾವತಿ:>ಕಳೆದ ಕೆಲ ವರ್ಷಗಳ ಹಿಂದೆ ದಲಿತ ಮತ್ತು ಸವರ್ಣೀಯರ ಮಧ್ಯೆ ನಡೆದ ಗಲಭೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದ ಕೇಸರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಕುಂಬಿ ಗ್ರಾಮದಲ್ಲಿ ಈಗೀಗ ಜನರ ಮಧ್ಯೆ ಸಾಮರಸ್ಯ ಮೂಡತೊಡಗಿದೆ.ಭಾವೈಕ್ಯತೆಯ ಬೆಸುಗೆಯಂತಿರುವ ಮೊಹರಂ ಹಬ್ಬವು ಮತ್ತೀಗ ಗ್ರಾಮದ ಜನರನ್ನು ಒಂದು ಕಡೆ ಸೇರಿಸುವಲ್ಲಿ ವೇದಿಕೆಯಾಗಿದ್ದು, ಎಲ್ಲಾ ಜಾತಿ-ಜನಾಂಗದವರು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮೊಹರಂ ಹಬ್ಬದ ಕೊನೆಯ ದಿನವಾಗಿದ್ದ ಶುಕ್ರವಾರ, ಇಡೀ ಗ್ರಾಮ ಸಂಭ್ರಮಾಚರಣೆಯಲ್ಲಿ ಮೊಳಗಿತ್ತು.

ಗ್ರಾಮದ ಮಸೀದಿಯಲ್ಲಿ ಕೂರಿಸಿದ್ದ ಹಸೇನಿ, ಹುಸೇನಿ, ಮೌಲಾಲಿ ಸೇರಿದಂತೆ ಆರು ‘ಪಂಜಾ’ ದೈವಗಳಿಗೆ ಜನ ಹರಕೆ ಹೊತ್ತು ಸಕ್ಕರೆ ಓದಿಸಿ ನೈವೇದ್ಯ ನೀಡಿ, ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಬಳಿಕ ಊರಿನ ಹೊರಗಿರುವ ಹಳ್ಳದಲ್ಲಿ ದಫನ್ ಕಾರ್ಯ ಮಾಡಲಾಯಿತು.ಮೊಹರಂ ಸಮಿತಿ ಸದಸ್ಯರಾದ ಬಸವರಾಜ ಈಡಿಗೇರ, ಪರಶುರಾಮ ಮಡ್ಡೇರ, ವೀರೇಶ ಭೋವಿ, ಹುಸೇನಪ್ಪ ಮಡಿವಾಳರ, ಹನುಮಂತ ಮಡಿವಾಳ, ಸಣ್ಣ ಹುಲುಗಪ್ಪ, ದುರುಗೇಶಪ್ಪ, ನಜೀರ್ ಮುಲ್ಲಾ, ತಿರುಮಲ ನಾಯಕ್, ಬಸವರಾಜ ಭೋವಿ ಇತರರು ಇದ್ದರು.ಗ್ರಾಮದ ಪ್ರಮುಖರಾದ ಮಲ್ಲಿಕಾರ್ಜುನ ಶೆಟ್ಟರ್, ಬಸಯ್ಯಸ್ವಾಮಿ ಹಿರೇಮಠ, ಬಸವರಾಜ ಸಿಪಿಎಂ, ತಿಪ್ಪಣ್ಣ ಮಾಸ್ತರ್, ಹುಲುಗಪ್ಪ ದಳಪತಿ, ಸಂಗಮೇಶ ಹಿರೇಮಠ, ವೀರೇಶ ನಾಯಕ ತಳವಾರ, ವೀರೇಶ ಗೋಡಿನಾಳ, ದೇವರಾಜ ಭೋವಿ, ಶರಣೇಗೌಡ, ಆಸೀಫ್ ಸಾಬ್ ಕಂದಗಲ್, ದೇವಪ್ಪ ಬಡಿಗೇರ ಭಾಗಿಯಾಗಿದ್ದರು.-


