ಸ್ವಾತಂತ್ರ್ಯವನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ: ಬಿ. ಪಾರ್ಥಸಾರಥಿ…

ಶ್ರೀರಾಮನಗರ: ಸ್ವಾಮಿ ವಿವೇಕಾನಂದ ಪಬ್ಲಿಕ್ ಸ್ಕೂಲ್‌ನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.ಶಾಲೆಯ ಸಂಸ್ಥಾಪಕರಾದ ಬಿ. ಪಾರ್ಥಸಾರಥಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಮಹಾನ್ ಹೋರಾಟಗಾರರು ತಮ್ಮ ಜೀವ, ಕುಟುಂಬ ಹಾಗೂ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. ಅವರ ತ್ಯಾಗದ ಫಲವಾಗಿ ದೊರೆತ ಸ್ವಾತಂತ್ರ್ಯವನ್ನು ಪ್ರತಿಯೊಬ್ಬರೂ ಗೌರವದಿಂದ ಕಾಣಬೇಕು ಮತ್ತು ಎಂದಿಗೂ ಹಗುರವಾಗಿ ಪರಿಗಣಿಸಬಾರದು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಪ್ರಭಾಕರ ಚಿನ್ನಪಾಟಿ ಮಾತನಾಡಿ, ಸ್ವಾತಂತ್ರ್ಯವು ನಮ್ಮ ಕಲ್ಪನೆಗಳು ಮತ್ತು ಆಸೆಗಳಿಗೆ ರೆಕ್ಕೆಗಳನ್ನು ನೀಡುವ ಶಕ್ತಿಯಾಗಿದೆ. ಸ್ವತಂತ್ರ ರಾಷ್ಟ್ರದಲ್ಲಿ ಜನಿಸಿರುವ ನಾವು ಅದೃಷ್ಟಶಾಲಿಗಳಾಗಿದ್ದು, ಯುವಕ-ಯುವತಿಯರು ದುಶ್ಚಟಗಳಿಗೆ ಬಲಿಯಾಗದೆ, ನಕಾರಾತ್ಮಕತೆಯನ್ನು ದೂರವಿಟ್ಟು ಆರೋಗ್ಯಯುತ ಹಾಗೂ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು.

ಇದು ಹೊಸ ತಲೆಮಾರಿನ ಯುವಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶಾರೂನ್ ಕುಮಾರಿ ಮಾತನಾಡಿ, ಬ್ರಿಟಿಷರ ವಸಾಹತುಶಾಹಿ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ ಪಡೆದ ದಿನವಾದ ಆಗಸ್ಟ್ 15ರಂದು ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನವು ಕೇವಲ ಆಚರಣೆಗೆ ಸೀಮಿತವಾಗದೆ, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದರ ಜೊತೆಗೆ ಪ್ರತಿಯೊಬ್ಬ ಭಾರತೀಯನಲ್ಲೂ ದೇಶಭಕ್ತಿಯ ಮನೋಭಾವವನ್ನು ಬೆಳೆಸುವ ಮಹತ್ವದ ದಿನವಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ, ಪಿರಮಿಡ್ ಪ್ರದರ್ಶನ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಜೀವನ, ತ್ಯಾಗ ಮತ್ತು ಕೊಡುಗೆಗಳನ್ನು ಬಿಂಬಿಸುವ ನಾಟಕಗಳನ್ನು ಪ್ರದರ್ಶಿಸಿದರು. ವಿವಿಧ ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಷಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.

