ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದೆ; ಸರ್ಕಾರ ತಕ್ಷಣ ಬರಗಾಲ ಘೋಷಿಸಬೇಕು: ಸಿ.ಟಿ. ರವಿ.
ಗಂಗಾವತಿಯಲ್ಲಿ ಬರಪೀಡಿತ ಪ್ರದೇಶಗಳ ವೀಕ್ಷಣೆ – ರೈತರ ಪರ ಸದನದಲ್ಲಿ ಧ್ವನಿ ಎತ್ತುವ ಭರವಸೆ – ರಾಜಕೀಯ ಟೀಕೆಗಾಗಿ ಬಂದಿಲ್ಲ ಎಂದ ಬಿಜೆಪಿ ಹಿರಿಯ ಮುಖಂಡ…

ಗಂಗಾವತಿ | ಜುಲೈ 27: ಉತ್ತರ ಕರ್ನಾಟಕದಲ್ಲಿ ತೀವ್ರಗೊಂಡಿರುವ ಬರ ಪರಿಸ್ಥಿತಿಯನ್ನು ಪರಿಶೀಲಿಸಲು ಕೊಪ್ಪಳ ಜಿಲ್ಲೆಯ ಗಂಗಾವತಿಗೆ ಆಗಮಿಸಿದ್ದ ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರು ಹಾಗೂ ಬಿಜೆಪಿ ಹಿರಿಯ ಮುಖಂಡರಾದ ಸಿ.ಟಿ. ರವಿ ಅವರು ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ್ದು, ಸರ್ಕಾರ ತಕ್ಷಣ ಬರಗಾಲ ಘೋಷಿಸಿ ರೈತರಿಗೆ ಅಗತ್ಯ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗಗಳಲ್ಲಿ ಸಮರ್ಪಕ ಮಳೆಯಾಗಿಲ್ಲ. ಅಲ್ಲಿ ಮಳೆ ಇಲ್ಲದಿದ್ದರೆ ತುಂಗಭದ್ರಾ ನದಿಗೆ ನೀರು ಹೇಗೆ ಬರಲು ಸಾಧ್ಯ? ರಾಜ್ಯದ ಅನೇಕ ನದಿಗಳು ನೀರಿನ ಕೊರತೆಯನ್ನು ಎದುರಿಸುತ್ತಿವೆ. ಬಹುತೇಕ ಜಲಾಶಯಗಳು ಇನ್ನೂ ಭರ್ತಿಯಾಗಿಲ್ಲ. ಮಹಾರಾಷ್ಟ್ರದಲ್ಲಿ ಅತಿವೃಷ್ಟಿಯಾಗಿರುವ ಕಾರಣ ಆಲಮಟ್ಟಿ ಜಲಾಶಯಕ್ಕೆ ಮಾತ್ರ ಸ್ವಲ್ಪ ಪ್ರಮಾಣದ ನೀರು ಹರಿದು ಬರುತ್ತಿದೆ. ಅದನ್ನು ಹೊರತುಪಡಿಸಿದರೆ ರಾಜ್ಯದ ಬಹುತೇಕ ಭಾಗಗಳಲ್ಲಿ ಬರಗಾಲದ ಛಾಯೆ ಆವರಿಸಿದೆ” ಎಂದು ಹೇಳಿದರು.ರಾಜ್ಯ ಸರ್ಕಾರ ಈಗಾಗಲೇ ಬರಗಾಲ ಘೋಷಿಸಬೇಕಾಗಿತ್ತು. ಆದರೆ ಇನ್ನೂ ಘೋಷಣೆ ಮಾಡದಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅವರು ಟೀಕಿಸಿದರು.ಗಂಗಾವತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ವೀಕ್ಷಣೆ ವೇಳೆ ಸಂಗ್ರಹಿಸಿದ ಮಾಹಿತಿಯನ್ನು ಸರ್ಕಾರದ ಗಮನಕ್ಕೆ ತಂದು, ವಿಧಾನಮಂಡಲದ ಸದನದಲ್ಲಿಯೂ ಈ ಕುರಿತು ಚರ್ಚಿಸಿ ರೈತರಿಗೆ ದೊರೆಯಬೇಕಾದ ಬೆಳೆ ನಷ್ಟ ಪರಿಹಾರ, ಕುಡಿಯುವ ನೀರಿನ ವ್ಯವಸ್ಥೆ, ಜಾನುವಾರುಗಳಿಗೆ ಮೇವು ಸೇರಿದಂತೆ ಅಗತ್ಯ ನೆರವು ದೊರಕಿಸುವ ನಿಟ್ಟಿನಲ್ಲಿ ಬಿಜೆಪಿ ಹೋರಾಟ ನಡೆಸಲಿದೆ ಎಂದು ಭರವಸೆ ನೀಡಿದರು.ಈ ವೇಳೆ ಪತ್ರಕರ್ತರು ಕೇಳಿದ ನೀಟ್ ಪರೀಕ್ಷೆ ಹಾಗೂ ಇತರ ರಾಜಕೀಯ ವಿಚಾರಗಳಿಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, “ಕಾಂಗ್ರೆಸ್ ನಾಯಕರದು ಎರಡು ನಾಲಿಗೆಯ ಧೋರಣೆ. ಕರ್ನಾಟಕದಲ್ಲಿ ಕೆಪಿಎಸ್‌ಸಿ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ಅವರು ಮೌನವಾಗಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ಸಾವಿರಾರು ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಕೆಪಿಎಸ್‌ಸಿಯ ನೇಮಕಾತಿ ಪ್ರಕ್ರಿಯೆಯಲ್ಲಿ ಹಲವು ಅಕ್ರಮಗಳ ಬಗ್ಗೆ ರಾಜಕೀಯವಾಗಿ ಚರ್ಚೆ ಮಾಡುತ್ತೇನೆ. ಆದರೆ ಇಂದು ನಾನು ಇಲ್ಲಿ ಬಂದಿರುವುದು ರೈತರ ಸಂಕಷ್ಟವನ್ನು ಅರಿಯಲು. ಯಾವುದೇ ರಾಜಕೀಯ ಪಕ್ಷವನ್ನು ಟೀಕಿಸಲು ಬಂದಿಲ್ಲ” ಎಂದು ಸ್ಪಷ್ಟಪಡಿಸಿದರು.ಬರದಿಂದ ತತ್ತರಿಸಿರುವ ರೈತರ ಸಮಸ್ಯೆಗಳಿಗೆ ಆದ್ಯತೆ ನೀಡಬೇಕು. ರೈತರಿಗೆ ಕಾನೂನುಬದ್ಧವಾಗಿ ದೊರೆಯಬೇಕಾದ ಎಲ್ಲಾ ಪರಿಹಾರಗಳನ್ನು ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲಾಗುವುದು ಎಂದು ಅವರು ತಿಳಿಸಿದರು.ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು, ರೈತ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

