ಬರ ಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲು ಒತ್ತಾಯ…
ಗಂಗಾವತಿ : ಪ್ರಸಕ್ತ ವಷ೯ದಲ್ಲಿ ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗದೆ ಇರುವ ಕಾರಣಕ್ಕೆ ಸರಿಯಾಗಿ ಬೆಳೆಗಳು ಬೆಳೆದಿಲ್ಲ. ಹಾಗಾಗಿ ಕೊಪ್ಪಳ, ಯಲಬುಗಾ೯ ಹಾಗೂ ಕುಷ್ಟಗಿ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಬೇಕು ಎಂದು ರಾಜ್ಯ ರೈತಪರ ಹೋರಾಟ ಸಂಘಟನೆಯ ರಾಜ್ಯಾಧ್ಯಕ್ಷ ದೊಡ್ಡ ಬರಮಣ್ಣ ಒತ್ತಾಯಿಸಿದ್ದಾರೆ. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದಾಗಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ವ್ಯಾಪಕವಾದ ಮಳೆಯಾಗಿಲ್ಲ. ಮಳೆಯ ಕೊರತೆಯಿಂದ ಬೆಳೆ ಹಾನಿಯಾಗಿದ್ದು, ಈಗಾಗಲೇ ಅಧಿಕಾರಿಗಳು ಬೆಳೆ ಪರಿಶೀಲನೆ ನಡೆಸಿ, ಹಾನಿಯಾಗಿರುವ ಪ್ರಮಾಣವನ್ನು ವರದಿ ನೀಡಿದ್ದಾರೆ. ಅಧಿಕಾರಿಗಳು ನೀಡಿದ ವರದಿಯ ಪ್ರಕಾರ ಜಿಲ್ಲೆಯಲ್ಲಿ 1,90,667 ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ. ಇದರಲ್ಲಿ ಕುಷ್ಟಗಿ ತಾಲೂಕಿನಲ್ಲಿ 64,100 ಹೆಕ್ಟೇರ್, ಯಲಬುಗಾ೯ ತಾಲುಕಿನಲ್ಲಿ 43,145 ಹೆಕ್ಟೇರ್, ಕೊಪ್ಪಳ ತಾಲೂಕಿನ 28,605 ಹೆಕ್ಟೇರ್ ಪ್ರದೇಶ ಮಳೆಯ ಕೊರತೆಯಿಂದ ಹಾನಿಯಾಗಿದೆ. ಸರಿಯಾಗಿ ಮಳೆಯಾಗದೆ ಮೆಕ್ಕೆಜೋಳ, ಸಜ್ಜೆ, ಹೆಸರು, ತೊಗರಿ, ಸೂಯ೯ಕಾಂತಿ, ಹತ್ತಿ ಸೇರಿದಂತೆ ನಾನಾ ಬೆಳೆಗಳು ಹಾನಿಯಾಗಿ ಹೋಗಿವೆ. ಆದರೆ ಸರಕಾರ ಮಾತ್ರ ಈ ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಮುಂದಾಗಿಲ್ಲ. ಕೂಡಲೇ ರಾಜ್ಯ ಸರಕಾರ ಈ ಮೂರು ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಬೇಕು. ಪ್ರತಿ ಗ್ರಾಮದಲ್ಲಿ ವೈಜ್ಞಾನಿಕ ಸಮಿಕ್ಷೆಯನ್ನು ನಡೆಸಿ, ಅಹ೯ ಪ್ರತಿಯೊಬ್ಬ ರೈತನಿಗೆ ಪರಿಹಾರ ನೀಡಬೇಕು. ಬೆಳೆ ವಿಮೆ ಮಾಡಿಸಿದ ರೈತರಿಗೆ ಮಧ್ಯಂತರ ಬೆಳೆ ವಿಮೆ ಪರಿಹಾರ ತಕ್ಷಣ ಬಿಡುಗಡೆ ಮಾಡಬೇಕು. ರೈತರ ಕೃಷಿ ಸಾಲಗಳ ಮಸೂಲಾತಿಗೆ ತಾತ್ಕಾಲಿಕ ನಿಬ೯ಂಧ ನೀಡಬೇಕು. ಸರಕಾರಿ, ರಾಷ್ಟ್ರೀಕೃತ ಬ್ಯಾಂಕಗಳಲ್ಲಿನ ಕೃಷಿ ಸಾಲಗಳಿಗೆ ಬಡ್ಡಿ ರಿಯಾಯಿತಿ ನೀಡಬೇಕು. ಗ್ರಾಮೀಣ ಭಾಗಗಳಿಗೆ ವಿದ್ಯುತ್ ಪೂರೈಕೆ ಒದಗಿಸಬೇಕು. ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಕೊರತೆಯಾಗದಂತೆ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು.

