ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಆರ್ಥಿಕ ನೆರವು: ರೆಡ್ಡಿ ಶ್ರೀನಿವಾಸ…

ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಆರ್ಥಿಕ ನೆರವು: ರೆಡ್ಡಿ ಶ್ರೀನಿವಾಸ…

ಗಂಗಾವತಿ : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಆರ್ಥಿಕವಾಗಿ ನೆರವಾಗುತ್ತಿವೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ವಿವಿಧ ಗ್ಯಾರಂಟಿ ಯೋಜನೆಗಳು ಜನರಿಗೆ ವರದಾನವಾಗಿವೆ. ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 3.20 ಲಕ್ಷ ಫಲಾನುಭವಿಗಳಿದ್ದು, ಇದುವರೆಗೆ 62 ಕೋಟಿ ನೆರವು ನೀಡಲಾಗಿದೆ. ಗಂಗಾವತಿ ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸುಮಾರು 56 ಸಾವಿರ ಫಲಾನುಭವಿಗಳಿಗೆ 11 ಕೋಟಿ ಹಣ ನೀಡಲಾಗುತ್ತಿದೆ. ಒಟ್ಟಾರೆ 32 ಕಂತುಗಳಲ್ಲಿ ಹಣ ವಿತರಿಸಲಾಗಿದೆ ಎಂದು ತಿಳಿಸಿದರು.ಗೃಹಲಕ್ಷ್ಮಿ ಯೋಜನೆಯ ಹಣದಿಂದ ಬಡ ಕುಟುಂಬಗಳು ಔಷಧ ಖರೀದಿ, ಸ್ವಯಂ ಉದ್ಯೋಗ ಹಾಗೂ ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಹಲವು ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದರು.ಜಿಲ್ಲೆಯಲ್ಲಿ ಮೃತಪಟ್ಟ ಸುಮಾರು 7 ಸಾವಿರ ಫಲಾನುಭವಿಗಳ ಖಾತೆಗಳಿಗೆ 2.44 ಕೋಟಿ ಹಣ ಜಮೆಯಾಗಿದ್ದು, ಈ ಪೈಕಿ 90 ಲಕ್ಷ ವಸೂಲಿ ಮಾಡಲಾಗಿದೆ. ಇನ್ನೂ 1.30 ಕೋಟಿ ವಸೂಲಿ ಬಾಕಿಯಿದೆ. ಈ ಹಣವನ್ನು ಮರುಪಡೆಯುವ ಕ್ರಮ ಮುಂದುವರಿದಿದೆ ಎಂದು ಹೇಳಿದರು.ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 15 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ 40 ಕೋಟಿಗೂ ಅಧಿಕ ಹಣ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಗಂಗಾವತಿ ತಾಲೂಕಿನಲ್ಲಿ 64,380 ಪಡಿತರ ಚೀಟಿಗಳಿದ್ದು, 2,27,336 ಫಲಾನುಭವಿಗಳು ಅಕ್ಕಿ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು.ಶಕ್ತಿ ಯೋಜನೆಯ ಬಳಕೆಯಲ್ಲಿ ಗಂಗಾವತಿ ಮುಂಚೂಣಿಯಲ್ಲಿದೆ. ಜಿಲ್ಲೆಯ ಬಸ್ ಸಮಸ್ಯೆ ಪರಿಹರಿಸಲು 60 ಹೊಸ ಬಸ್‌ಗಳು ಬರಲಿದ್ದು, ಹೆಚ್ಚಿನ ಬಸ್‌ಗಳನ್ನು ಗಂಗಾವತಿಗೆ ಒದಗಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ರೆಡ್ಡಿ ಶ್ರೀನಿವಾಸ್ ಹೇಳಿದರು.ಗೃಹಜ್ಯೋತಿ ಯೋಜನೆಯ ಮರುಪರಿಶೀಲನೆ ಆರಂಭವಾಗಿದ್ದು, ನೈಜ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *