ಗೊಂದೂಳಿ ಸಮಾಜದ ಶ್ರೀ ಪಾಂಡುರಂಗ ದೇವಸ್ಥಾನ ಜೀರ್ಣೋದ್ಧಾರಕ್ಕೆ ದಾನಿಗಳ ನೆರವು ಅಗತ್ಯ: ವಾಸುದೇವ್ ನವಲಿ ಮನವಿ….

ಗಂಗಾವತಿ: ನಗರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 1ರ ಪಂಪಾನಗರದಲ್ಲಿರುವ 60 ವರ್ಷಗಳ ಇತಿಹಾಸವಿರುವ ಗೊಂದೂಳಿ ಸಮಾಜದ ಶ್ರೀ ಪಾಂಡುರಂಗ ರುಕ್ಮಾಯಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಉದಾರ ದಾನಿಗಳ ಆರ್ಥಿಕ ನೆರವಿನ ಅಗತ್ಯವಿದೆ ಎಂದು ಮಾಜಿ ನಗರಸಭಾ ಸದಸ್ಯ ವಾಸುದೇವ್ ನವಲಿ ತಿಳಿಸಿದ್ದಾರೆ.ಆಷಾಢ ಮಾಸದ ಏಕಾದಶಿ ಹಾಗೂ ಪಂಢರಾಪುರದ ಮಹಾರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಈಗಾಗಲೇ ಶಾಸಕರಾದ ಜಿ.ಜನಾರ್ದನ್ ರೆಡ್ಡಿ ಅವರು ತಮ್ಮ ಅನುದಾನದಿಂದ ದೇವಸ್ಥಾನದ ಅಭಿವೃದ್ಧಿಗೆ ಸಹಾಯ ಮಾಡಿದ್ದು, ದೇವಸ್ಥಾನದ ಸಂಪೂರ್ಣ ಜೀರ್ಣೋದ್ಧಾರಕ್ಕೆ ಮತ್ತಷ್ಟು ಆರ್ಥಿಕ ಸಂಪನ್ಮೂಲದ ಅವಶ್ಯಕತೆಯಿದೆ. ಆಸ್ತಿಕ ಭಕ್ತರು ಮತ್ತು ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ದೇಣಿಗೆ ನೀಡುವುದರ ಮೂಲಕ ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.ಆಷಾಢ ಏಕಾದಶಿ ಪ್ರಯುಕ್ತ ಶ್ರೀ ಪಾಂಡುರಂಗ ಮತ್ತು ರುಕ್ಮಾಯಿ ಮೂಲಮೂರ್ತಿಗೆ ಕಾಕಡ ಆರತಿ, ವಿಶೇಷ ಅಭಿಷೇಕ, ಪಾರಾಯಣ ಹಾಗೂ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಈ ವಿಶೇಷ ಪೂಜೆಯಲ್ಲಿ ಗಂಗಾವತಿ ಸುತ್ತಮುತ್ತಲಿನ ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡು ದೇವರ ದರ್ಶನ ಪಡೆದು ಧನ್ಯರಾದರು.ಈ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಪ್ರಕಾಶ ಗೊಂದೊಳಿ, ಮುಖಂಡರಾದ ನಾಗರಾಜ ಗಣಾಚಾರಿ ಸೇರಿದಂತೆ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಸಮಾಜದ ಹಿರಿಯರು ಉಪಸ್ಥಿತರಿದ್ದರು.

