ಗಂಗಾಮತ ಸಮಾಜಕ್ಕೆ ಸಚಿವ ಸ್ಥಾನ ನೀಡದಿದ್ದರೆ ಕಾಂಗ್ರೆಸ್‌ಗೆ ತಕ್ಕ ಪಾಠ: ಹನುಮೇಶ್ ಬಟಾರಿ ಎಚ್ಚರಿಕೆ….

ಗಂಗಾವತಿ, ಆ.7: ಗಂಗಾಮತ ಸಮಾಜದ ಏಕೈಕ ಶಾಸಕ ಹಾಗೂ ಮಾಜಿ ಸಚಿವ ಮಂಕಾಳ ವೈದ್ಯ ಅಥವಾ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರು ಅವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡದಿರುವುದು ಹಿಂದುಳಿದ ಗಂಗಾಮತ ಸಮಾಜಕ್ಕೆ ಮಾಡಿರುವ ಅನ್ಯಾಯ ಮತ್ತು ಅಗೌರವ ಎಂದು ಗಂಗಾವತಿ ತಾಲೂಕು ಗಂಗಾಮತಸ್ಥರ ಸಂಘದ ಜಿಲ್ಲಾ ಗೌರವಾಧ್ಯಕ್ಷ ರಾಜಶೇಖರ್ ಮುಷ್ಟೂರು ಹಾಗೂ ತಾಲೂಕು ಅಧ್ಯಕ್ಷ ಹನುಮೇಶ್ ಬಟಾರಿ ಆರೋಪಿಸಿದರು.ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯ ವೇಳೆ ಸಮಾಜದ ಪ್ರತಿನಿಧಿಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರೂ, ಕೊನೆಯ ಕ್ಷಣದಲ್ಲಿ ಅವಕಾಶ ಕೈತಪ್ಪಿರುವುದು ಸಮಾಜದ ಜನರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.ರಾಜ್ಯದಲ್ಲಿ ಸುಮಾರು 60 ಲಕ್ಷ ಜನಸಂಖ್ಯೆ ಹೊಂದಿರುವ ಗಂಗಾಮತ ಸಮಾಜಕ್ಕೆ ಸಚಿವ ಸಂಪುಟದಲ್ಲಿ ಸಮರ್ಪಕ ಪ್ರಾತಿನಿಧ್ಯ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೂ ಸಮಾಜವನ್ನು ನಿರಂತರವಾಗಿ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.ಮಂಕಾಳ ವೈದ್ಯ ಅಥವಾ ತಿಪ್ಪಣ್ಣ ಕಮಕನೂರು ಅವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡದಿದ್ದಲ್ಲಿ, 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಗಂಗಾಮತ ಸಮಾಜ ತೀರ್ಮಾನಿಸಲಿದೆ ಎಂದು ಅವರು ಎಚ್ಚರಿಕೆ ನೀಡಿದರು.ಮುಂದಿನ ದಿನಗಳಲ್ಲಿ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಹೊಸಳ್ಳಿ ಮರಿಯಪ್ಪ, ಹನುಮೇಶಪ್ಪ, ಆನೆಗುಂದಿ ವೆಂಕಟೇಶ್, ಪರಸಪ್ಪ ಆನೆಗುಂದಿ, ಹೊನ್ನಪ್ಪ ಕುಂಟೋಜಿ, ರಾಮಣ್ಣ, ಆನೆಗುಂದಿ ಪುಟ್ಟ, ವೀರೇಶ್, ಶಿವಮೂರ್ತಿಯಪ್ಪ ಗೋಪಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದರು.

