ಗಂಗಾವತಿ: ಕಿಲ್ಲಾ ಏರಿಯಾದಲ್ಲಿ ನರಕಸದೃಶ ವಾತಾವರಣ; ತೆರೆದ ಒಳಚರಂಡಿ ಗುಂಡಿಗೆ ಬಿದ್ದ ಜಾನುವಾರುಗಳು, ನಗರಸಭೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ!​

ಗಂಗಾವತಿ: ಕಿಲ್ಲಾ ಏರಿಯಾದಲ್ಲಿ ನರಕಸದೃಶ ವಾತಾವರಣ; ತೆರೆದ ಒಳಚರಂಡಿ ಗುಂಡಿಗೆ ಬಿದ್ದ ಜಾನುವಾರುಗಳು, ನಗರಸಭೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ!​

ಗಂಗಾವತಿ: ನಗರದ 4ನೇ ವಾರ್ಡಿನ ಕಿಲ್ಲಾ ಏರಿಯಾ ನಿವಾಸಿಗಳು ದಿನನಿತ್ಯ ನರಕಸದೃಶ ವಾತಾವರಣದಲ್ಲಿ ಬದುಕುವಂತಾಗಿದೆ. ಇಲ್ಲಿನ ಒಳಚರಂಡಿ (ಯುಜಿಡಿ) ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಕಿಲ್ಲಾ ಏರಿಯಾ ಇಡೀ ಕಸದ ದೊಣ್ಣೆಯಾಗಿ ಮಾರ್ಪಟ್ಟಿದೆ. ನಗರಸಭೆಯ ಬೇಜವಾಬ್ದಾರಿತನದಿಂದಾಗಿ ಸಾರ್ವಜನಿಕರ ಮತ್ತು ಜಾನುವಾರುಗಳ ಜೀವಕ್ಕೆ ಕಂಟಕ ಎದುರಾಗಿದೆ.​ತೆರೆದ ಚರಂಡಿ ಗುಂಡಿಗೆ ಬಿದ್ದ ಕೋಣ, ಆಕಳು!​ಇಲ್ಲಿನ ಮುಖ್ಯ ರಸ್ತೆಯ ಪಕ್ಕದಲ್ಲೇ ಇರುವ ಒಳಚರಂಡಿಯ ಬೃಹತ್ ಮ್ಯಾನ್‌ಹೋಲ್ (ಗುಂಡಿ) ಯಾವುದೇ ಸುರಕ್ಷಿತ ಮೂಚ್ಚಳವಿಲ್ಲದೆ ಸಂಪೂರ್ಣವಾಗಿ ತೆರೆದುಕೊಂಡಿದೆ. ನಿನ್ನೆ ರಾತ್ರಿ ಈ ಆಳವಾದ ಅಪಾಯಕಾರಿ ಗುಂಡಿಗೆ ಆಕಳು ಮತ್ತು ಕೋಣ ಬಿದ್ದಿದ್ದು, ಮೂಕ ಪ್ರಾಣಿಗಳು ತೀವ್ರ ಸಂಕಷ್ಟ ಅನುಭವಿಸಿವೆ.

ಈ ಭಾಗದಲ್ಲಿ ಸಣ್ಣ ಸಣ್ಣ ಶಾಲಾ ಮಕ್ಕಳು ದಿನನಿತ್ಯ ಆಟವಾಡುತ್ತಿದ್ದು, ಯಾವುದೇ ಕ್ಷಣದಲ್ಲಿ ಮಕ್ಕಳು ಈ ಗುಂಡಿಗೆ ಬಿದ್ದು ಪ್ರಾಣಾಪಾಯ ಸಂಭವಿಸುವ ಭೀತಿ ಎದುರಾಗಿದೆ. ರಾತ್ರಿ ವೇಳೆ ಸಂಚರಿಸುವ ಸಾರ್ವಜನಿಕರಿಗಂತೂ ಇದು ಮೃತ್ಯುಕೂಪದಂತಿದೆ.​ಕ್ಯಾರೆ ಎನ್ನದ ನಗರಸಭೆ ಅಧಿಕಾರಿಗಳು​ಕಿಲ್ಲಾ ಏರಿಯಾದ ಈ ದುಸ್ಥಿತಿಯ ಬಗ್ಗೆ ಮತ್ತು ತೆರೆದ ಮ್ಯಾನ್‌ಹೋಲ್‌ನಿಂದ ಉಂಟಾಗುತ್ತಿರುವ ಅಪಾಯಗಳ ಬಗ್ಗೆ ಇಲ್ಲಿನ ಸಾರ್ವಜನಿಕರು ಈಗಾಗಲೇ ನಗರಸಭೆ ಕಮಿಷನರ್ ಹಾಗೂ ಸಂಬಂಧಪಟ್ಟ ಸಿಬ್ಬಂದಿ ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಈ ಸಮಸ್ಯೆಗೆ ಕ್ಯಾರೆ ಎನ್ನದೆ, ಕುಂಭಕರ್ಣ ನಿದ್ದೆಗೆ ಜಾರಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.​ಬಳಕೆಗೆ ಬಾರದ ಮಹಿಳಾ ಶೌಚಾಲಯ; ಹರಡಿದ ಕಸದ ರಾಶಿ​ಒಂದೆಡೆ ಒಳಚರಂಡಿಯ ನೀರು ರಸ್ತೆಯಲ್ಲೇ ಹರಿಯುತ್ತಿದ್ದರೆ, ಮತ್ತೊಂದೆಡೆ ಇಡೀ ರಸ್ತೆಯುದ್ದಕ್ಕೂ ಪ್ಲಾಸ್ಟಿಕ್, ಹೂವು ಹಾಗೂ ತ್ಯಾಜ್ಯ ವಸ್ತುಗಳ ಕಸದ ರಾಶಿ ಬಿದ್ದಿದೆ. ದುರ್ನಾತದಿಂದಾಗಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಇಷ್ಟೇ ಅಲ್ಲದೆ, ಈ ಭಾಗದಲ್ಲಿ ಮಹಿಳೆಯರಿಗಾಗಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯವಿದ್ದರೂ ಸಹ ಅದು ಸಮರ್ಪಕ ನಿರ್ವಹಣೆಯಿಲ್ಲದೆ ಸಾರ್ವಜನಿಕರ ಬಳಕೆಗೆ ಬಾರದಂತಾಗಿದೆ. ಇದರಿಂದಾಗಿ ಇಲ್ಲಿನ ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.​ಇನ್ನಾದರೂ ಎಚ್ಚೆತ್ತುಕೊಳ್ಳುವುದೇ ನಗರಸಭೆ?​ಸ್ಥಳೀಯ ಹಿರಿಯರು, ಮಹಿಳೆಯರು ಹಾಗೂ ಮಕ್ಕಳು ಒಟ್ಟಾಗಿ ನಿಂತು ತಮ್ಮ ವಾರ್ಡಿನ ನರಕ ಯಾತನೆಯನ್ನು ಮಾಧ್ಯಮಗಳ ಮುಂದೆ ತೋಡಿಕೊಂಡಿದ್ದಾರೆ. “ಯಾವುದಾದರೂ ದೊಡ್ಡ ಅನಾಹುತ ಸಂಭವಿಸುವ ಮುನ್ನ ನಗರಸಭೆಯು ತಕ್ಷಣ ಎಚ್ಚೆತ್ತುಕೊಂಡು, ಈ ಒಳಚರಂಡಿ ಗುಂಡಿಗೆ ಸೂಕ್ತ ಮೂಚ್ಚಳ ಅಳವಡಿಸಬೇಕು. ಕಸದ ರಾಶಿಯನ್ನು ತೆರವುಗೊಳಿಸಿ, ಮಹಿಳಾ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು” ಎಂದು ಕಿಲ್ಲಾ ಏರಿಯಾದ ನಿವಾಸಿಗಳು ಕಡಕ್ ಆಗಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *