
ಗಂಗಾವತಿ, ಜುಲೈ 16: ಡ್ರೀಮ್ ವರ್ಲ್ಡ್ ಮಾರ್ಷಲ್ ಆರ್ಟ್ಸ್ ಟ್ರಸ್ಟ್ (ರಿ), ಇಂಡಿಯಾ ಇವರ ನೇತೃತ್ವದಲ್ಲಿ 2ನೇ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್–2026 ಇದೇ ಜುಲೈ 26ರಂದು ಭಾನುವಾರ ಗಂಗಾವತಿ ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಈ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾರತ, ಶ್ರೀಲಂಕಾ, ನೇಪಾಳ ಹಾಗೂ ಬಾಂಗ್ಲಾದೇಶ ಸೇರಿದಂತೆ ನಾಲ್ಕು ರಾಷ್ಟ್ರಗಳ 600ಕ್ಕೂ ಅಧಿಕ ಕರಾಟೆ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಸ್ಪರ್ಧೆಯು ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಲ್ಲಿ ಆಯೋಜನೆಯಾಗಿದ್ದು, ವಿವಿಧ ವಯೋಮಾನದ ಸ್ಪರ್ಧಿಗಳು ತಮ್ಮ ಕೌಶಲ್ಯ ಹಾಗೂ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.
ಕರಾಟೆ ಕ್ರೀಡೆಯನ್ನು ಯುವಜನರಲ್ಲಿ ಉತ್ತೇಜಿಸುವುದು, ಅಂತರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಅನುಭವವನ್ನು ಒದಗಿಸುವುದು ಹಾಗೂ ವಿವಿಧ ರಾಷ್ಟ್ರಗಳ ನಡುವಿನ ಕ್ರೀಡಾ ಸ್ನೇಹ ಮತ್ತು ಸೌಹಾರ್ದತೆಯನ್ನು ಮತ್ತಷ್ಟು ಬಲಪಡಿಸುವುದು ಈ ಚಾಂಪಿಯನ್‌ಶಿಪ್‌ನ ಪ್ರಮುಖ ಉದ್ದೇಶವಾಗಿದೆ.
ಸ್ಪರ್ಧೆಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಟ್ರೋಫಿ, ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಗುವುದು. ದೇಶ-ವಿದೇಶಗಳ ಗಣ್ಯ ಕರಾಟೆ ತರಬೇತಿದಾರರು, ಕ್ರೀಡಾ ತಜ್ಞರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಕುರಿತು ಡ್ರೀಮ್ ವರ್ಲ್ಡ್ ಮಾರ್ಷಲ್ ಆರ್ಟ್ಸ್ ಟ್ರಸ್ಟ್ (ರಿ), ಇಂಡಿಯಾದ ಸಂಸ್ಥಾಪಕ ಹಾಗೂ ಅಧ್ಯಕ್ಷರು ಹಾಗೂ ಖ್ಯಾತ ಕರಾಟೆ ತರಬೇತಿದಾರರಾದ ಡಾ. ಶಿಹಾನ್ ಜಬಿವುಲ್ಲಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು, ಜಿಲ್ಲೆಯ ಸಾರ್ವಜನಿಕರು, ಕ್ರೀಡಾಭಿಮಾನಿಗಳು ಹಾಗೂ ಯುವ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.
ಗಂಗಾವತಿಯಲ್ಲಿ 2ನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್: ನಾಲ್ಕು ರಾಷ್ಟ್ರಗಳ 600ಕ್ಕೂ ಹೆಚ್ಚು ಕ್ರೀಡಾಪಟುಗಳ ಭಾಗಿ…

