ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ: ಅಕ್ಟೋಬರ್ 11ರಂದು ಆಯೋಜನೆ…

ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ: ಅಕ್ಟೋಬರ್ 11ರಂದು ಆಯೋಜನೆ…

ಗಂಗಾವತಿ : ಎಎಸ್ಐ-ಕೆಎಸ್ಸಿ ವಿಜಯನಗರ ಶಾಖೆ, ಭಾರತೀಯ ವೈದ್ಯಕೀಯ ಸಂಘ (ಐಎಂಎ), ಲಯನ್ಸ್ ಕ್ಲಬ್ ಹಾಗೂ ಕರ್ನಾಟಕ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಅಕ್ಟೋಬರ 11 ರಂದು ಆಯೋಜಿಸಲಾಗಿದೆ ಎಂದು ಐಎಂಎ ಅಧ್ಯಕ್ಷ ಡಾ. ಮಲ್ಲನಗೌಡ ಪಿ. ಪಾಟೀಲ್ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಅಕ್ಟೋಬರ್ 11ರಂದು ಭಾನುವಾರ ನಗರದ ಐಎಂಎ ಹಾಲ್‌ನಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಶಿಬಿರ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಹಾಗೂ ಗರ್ಭಕಂಠದ ಕ್ಯಾನ್ಸರ್‌ಗಳ ತಪಾಸಣೆಯನ್ನು ಶಿಬಿರದಲ್ಲಿ ಉಚಿತವಾಗಿ ನಡೆಸಲಾಗುವುದು ಎಂದು ತಿಳಿಸಿದರು.ಬಾಯಿಯಲ್ಲಿ ಗುಣವಾಗದ ಹುಣ್ಣು, ಬಿಳಿ ಅಥವಾ ಕೆಂಪು ಮಚ್ಚೆ, ಗಡ್ಡೆ, ನಿರಂತರ ನೋವು ಹಾಗೂ ಕುತ್ತಿಗೆಯಲ್ಲಿ ಗಡ್ಡೆ ಕಂಡುಬಂದರೆ ಬಾಯಿ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳಬೇಕು. ಸ್ತನದಲ್ಲಿ ಗಡ್ಡೆ, ಗಾತ್ರದಲ್ಲಿ ಬದಲಾವಣೆ, ಮೊಲೆತೊಟ್ಟು ಒಳಗೆ ಹೋಗುವುದು, ರಕ್ತಸ್ರಾವ ಅಥವಾ ಚರ್ಮದಲ್ಲಿ ಬದಲಾವಣೆ ಕಂಡುಬಂದರೆ ಸ್ತನ ಕ್ಯಾನ್ಸರ್ ತಪಾಸಣೆ ಅಗತ್ಯವಿದೆ ಎಂದರು.ಅದೇ ರೀತಿ ಮುಟ್ಟಿನ ನಡುವೆ ಅಸಹಜ ರಕ್ತಸ್ರಾವ, ಲೈಂಗಿಕ ಸಂಪರ್ಕದ ನಂತರ ರಕ್ತಸ್ರಾವ, ಮೆನೋಪಾಸ್ ನಂತರ ರಕ್ತಸ್ರಾವ, ಅಸಹಜ ಅಥವಾ ದುರ್ವಾಸನೆಯ ಯೋನಿ ಸ್ರಾವ ಹಾಗೂ ನಿರಂತರ ಕೆಳಹೊಟ್ಟೆ ನೋವು ಕಂಡುಬಂದಲ್ಲಿ ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. ಶಿಬಿರದಲ್ಲಿ ಭಾಗವಹಿಸಲು ನೋಂದಣಿಗಾಗಿ ಹನುಮೇಶ್: 9060332658, ಶಂಷಾದ್: 73496 94980 ಎನ್ನುವವರಿಗೆ ಸಂಪರ್ಕಿಸಬಹುದು.ಪ್ರಮುಖರಾದ ಡಾ. ವೆಂಕಟೇಶ್, ಡಾ. ಕೆ.ಎನ್. ಮಧುಸೂದನ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಜಿ. ದೇವರಾಜ, ಡಾ. ವಿ.ವಿ. ಚಿನಿವಾಲರ, ಐಎಂಎ ಖಜಾಂಚಿ ಡಾ. ಅರವಿಂದ ಹಾಗೂ ಕಾರ್ಯದರ್ಶಿ ಡಾ. ನಾಗರಾಜ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *