ಹುಲಿಗಿ ದೇವಸ್ಥಾನದ ಬಳಿ ಮುಳ್ಳಿನ ಕಂಟೆಯಲ್ಲಿ ಪತ್ತೆಯಾದ ನವಜಾತ ಶಿಶು: ಹೋಂ ಗಾರ್ಡ್‌ಗಳ ಸಮಯ ಪ್ರಜ್ಞೆಯಿಂದ ಬದುಕುಳಿದ ಹಸುಗೂಸು…
ಕೊಪ್ಪಳ:ಜಿಲ್ಲೆಯ ಪ್ರಸಿದ್ಧ ಹುಲಿಗೆಮ್ಮ ದೇವಿ ದೇವಸ್ಥಾನದ ಆವರಣದ ಬಳಿ ಹೃದಯವಿದ್ರಾವಕ ಹಾಗೂ ಅಷ್ಟೇ ಮಾನವೀಯ ಘಟನೆಯೊಂದು ನಡೆದಿದೆ. ಪ್ರಸಾದ ನಿಲಯದ ಸಮೀಪದ ಮುಳ್ಳಿನ ಕಂಟೆಯಲ್ಲಿ ಬಿದ್ದಿದ್ದ ನವಜಾತ ಹೆಣ್ಣು ಶಿಶುವೊಂದನ್ನು ಸಾರ್ವಜನಿಕರು ಹಾಗೂ ಹೋಂ ಗಾರ್ಡ್ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ರಕ್ಷಿಸಿದ್ದಾರೆ.ಘಟನೆಯ ವಿವರ:ಭಕ್ತರ ದಂಡೇ ಹರಿದುಬಂದಿದ್ದ ಸಂದರ್ಭದಲ್ಲಿ, ಮುಳ್ಳಿನ ಕಂಟೆಯೊಳಗಿಂದ ಬಂದ ಕಂದಮ್ಮನ ಕ್ಷೀಣ ಅಳುವಿನ ಸದ್ದು ಕೆಲವರ ಗಮನ ಸೆಳೆಯಿತು. ಕೂಡಲೇ ಎಚ್ಚೆತ್ತ ಸಾರ್ವಜನಿಕರು ಸ್ಥಳೀಯ ಹೋಂ ಗಾರ್ಡ್‌ಗಳಿಗೆ ಮಾಹಿತಿ ಮುಟ್ಟಿಸಿದರು.ಮಾಹಿತಿ ಸಿಗುತ್ತಿದ್ದಂತೆ ಧಾವಿಸಿದ ಹೋಂ ಗಾರ್ಡ್ ಸಿಬ್ಬಂದಿಗಳಾದ ಶಿವಕುಮಾರ್ ಹಾಗೂ ಮಾರುತಿ, ತಕ್ಷಣ ಕಾರ್ಯಾಚರಣೆ ನಡೆಸಿ ಮುಳ್ಳಿನ ಕಂಟೆಯಲ್ಲಿದ್ದ ಹಸುಗೂಸನ್ನು ಸುರಕ್ಷಿತವಾಗಿ ಹೊರತೆಗೆದರು.ಆರೋಗ್ಯ ಸ್ಥಿತಿ ಹಾಗೂ ರಕ್ಷಣಾ ಕ್ರಮ:ಮಗು ಜನಿಸಿ ಕೆಲವೇ ಗಂಟೆಗಳಾಗಿದ್ದು, ಕರಳುಬಳ್ಳಿ ಕೂಡ ಇತ್ತು.ಸುಮಾರು 2.4 ಕೆಜಿ ತೂಕವಿದ್ದ ಹೆಣ್ಣು ಶಿಶುವು ಹಸಿವಿನಿಂದ ಒದ್ದಾಡುತ್ತಿತ್ತು.ಮುಳ್ಳಿನ ಗಿಡಗಳಲ್ಲಿದ್ದರಿಂದ ಚರ್ಮದ ಮೇಲೆ ಗಾಯಗಳಾಗಿ ಹುಳುಗಳು ಕಚ್ಚಿರುವ ಹಾಗೂ ನಂಜಾಗಿರುವ ಶಂಕೆಯನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ.ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರದ ತಾಯಿ ಮತ್ತು ಮಗುವಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳ ಸಹಾಯವಾಣಿಗೂ (Childline) ಮಾಹಿತಿ ನೀಡಲಾಗಿದೆ.ಕಾಡುತ್ತಿರುವ ಪ್ರಶ್ನೆಗಳು:ಅಪಾರ ಸಂಖ್ಯೆಯಲ್ಲಿ ಭಕ್ತರು ಓಡಾಡುವ ಜನನಿಬಿಡ ಪ್ರದೇಶದಲ್ಲೇ ನವಜಾತ ಶಿಶುವನ್ನು ಹೀಗೆ ತ್ಯಜಿಸಿದ್ದು ಯಾಕೆ? ಕೃತ್ಯ ಎಸಗಿದವರು ಯಾರು? ಎಂಬಿತ್ಯಾದಿ ಪ್ರಶ್ನೆಗಳಿಗೆ ಪೊಲೀಸ್ ತನಿಖೆಯಿಂದಷ್ಟೇ ಉತ್ತರ ಸಿಗಬೇಕಿದೆ.ಆದಾಗ್ಯೂ, ಸಾರ್ವಜನಿಕರ ಜಾಗರೂಕತೆ ಮತ್ತು ಹೋಂ ಗಾರ್ಡ್‌ಗಳ ಮಾನವೀಯ ತುರ್ತು ಸ್ಪಂದನೆಯಿಂದ ಇಂದು ಆ ಹಸುಗೂಸು ಪುನರ್ಜನ್ಮ ಪಡೆದಿದ್ದು, ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

