ಸಿದ್ಧನಕೊಳ್ಳ ಮಠಕ್ಕೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಿ: ಭಕ್ತರ ಒಕ್ಕೊರಲ ಆಗ್ರಹ…

ಇಳಕಲ್, ಅ. 28 (ಬಾಗಲಕೋಟೆ):*ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನಲ್ಲಿ ನಿರಂತರ ದಾಸೋಹ ಹಾಗೂ ಕಲಾ ಪೋಷಕ ಮಠವೆಂದೇ ಇಡೀ ನಾಡಿನಲ್ಲಿ ಪ್ರಸಿದ್ಧಿ ಪಡೆದಿರುವ ಪುಣ್ಯಕ್ಷೇತ್ರ ಸಿದ್ಧನಕೊಳ್ಳ ಮಠಕ್ಕೆ ರಾಜ್ಯ ಸರ್ಕಾರದ ಅತ್ಯುನ್ನತ ಗೌರವವಾದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕು ಎಂಬ ಕೂಗು ಮಠದ ಅಪಾರ ಭಕ್ತ ವೃಂದದಿಂದ ಕೇಳಿ ಬರುತ್ತಿದೆ.ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುತ್ತಾ ಬಂದಿರುವ ಸಿದ್ಧನಕೊಳ್ಳ ಮಠವು ಸಾಂಸ್ಕೃತಿಕ, ಧಾರ್ಮಿಕ ಮತ್ತು ಜಾನಪದ ಕಲೆಗಳಿಗೆ ಹೆಸರುವಾಸಿಯಾಗಿದೆ. ಗ್ರಾಮೀಣ ಭಾಗದ ಕಲಾವಿದರನ್ನು ಗುರುತಿಸಿ, ಅವರ ಕಲೆಯನ್ನು ಪ್ರೋತ್ಸಾಹಿಸುವಲ್ಲಿ ಮಠವು ಮಹತ್ವದ ಪಾತ್ರ ವಹಿಸಿದೆ. ನಶಿಸುತ್ತಿರುವ ಜಾನಪದ ಕಲೆಗಳಿಗೆ ಮರುಜೀವ ನೀಡುವ ಕೆಲಸವನ್ನು ಮಠ ನಿರಂತರವಾಗಿ ಮಾಡುತ್ತಿದೆ.ಇಂತಹ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳಿಗೆ ಸರ್ಕಾರದ ಪ್ರಶಸ್ತಿ ಮತ್ತು ಗೌರವಗಳು ದೊರೆತರೆ, ಆ ಕಲೆ ಮತ್ತು ಮಠದ ಸೇವೆಗೆ ಸಿಗುವ ನಿಜವಾದ ಗೌರವವಾಗುತ್ತದೆ ಎಂಬುದು ಭಕ್ತರ ಅಭಿಪ್ರಾಯವಾಗಿದೆ.*ಶ್ರೀಗಳ ತತ್ವ – ಭಕ್ತರೇ ಮಠದ ಆಸ್ತಿ:*ಈ ಕ್ಷೇತ್ರದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಶಿವಕುಮಾರ ಸ್ವಾಮಿಗಳು ಮಠಕ್ಕೆ ಬರುವ ಪ್ರತಿಯೊಬ್ಬ ಭಕ್ತರಿಗೂ “ಭಕ್ತರೇ, ಈ ಮಠದ ಆಸ್ತಿ ಗಳಿಸುವುದಾದರೆ ಭಕ್ತರನ್ನು ಗಳಿಸು” ಎಂಬ ಅಮೃತ ನುಡಿಯನ್ನು ಹೇಳುತ್ತಾರೆ.

ಶ್ರೀಗಳ ಈ ಮಾತು ಇಂದು ಸತ್ಯವಾಗಿದೆ. ಸಾವಿರಾರು ಭಕ್ತರು ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ.ಗ್ರಾಮೀಣ ಭಾಗದ ಜನರ ಕಲ್ಯಾಣಕ್ಕಾಗಿ ಮತ್ತು ನಾಡಿನ ಸಂಸ್ಕೃತಿಯ ರಕ್ಷಣೆಗಾಗಿ ಶ್ರೀಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಅನ್ನ ದಾಸೋಹ, ಜ್ಞಾನ ದಾಸೋಹದ ಮೂಲಕ ಸಮಾಜಕ್ಕೆ ಬೆಳಕಾಗಿದ್ದಾರೆ.ಇಂತಹ ಪವಿತ್ರ ಕ್ಷೇತ್ರಕ್ಕೆ ಸರ್ಕಾರ ಕೊಡಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತರೆ, ಅದು ಮಠದ ಗೌರವವನ್ನು ಇಮ್ಮಡಿಗೊಳಿಸಿದಂತಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಸಿದ್ಧನಕೊಳ್ಳ ಮಠದ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಶ್ರೀಮಠದ ಭಕ್ತಾದಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

