ದೇವಾಂಗ ಪರಂಪರೆ ಶ್ರೇಷ್ಠವಾದುದು, ಆಚಾರ-ವಿಚಾರಗಳ ಪಾಲನೆ ನಮ್ಮ ಕರ್ತವ್ಯ: ನೀಲಕಂಠಪ್ಪ ನಾಗಶೆಟ್ಟಿ…
ಗಂಗಾವತಿ: ದೇವಾಂಗ ಸಮುದಾಯದ ಪರಂಪರೆ, ಆಚಾರ-ವಿಚಾರಗಳು ಹಾಗೂ ಸಾಂಸ್ಕೃತಿಕ ಮೌಲ್ಯಗಳು ಶ್ರೇಷ್ಠವಾಗಿವೆ. ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದರ ಜೊತೆಗೆ, ಪಾರಂಪರಿಕ ಆಚರಣೆಗಳನ್ನು ನಿಷ್ಠೆಯಿಂದ ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಉಪನ್ಯಾಸಕ ನೀಲಕಂಠಪ್ಪ ನಾಗಶೆಟ್ಟಿ ಹೇಳಿದರು.ನಗರದ ಶ್ರೀ ವೀರಭದ್ರಪ್ಪ ಹೆಬ್ಬಾಳ ಅವರ ಮನೆಯಲ್ಲಿ ಗಂಗಾವತಿ ತಾಲೂಕು ದೇವಾಂಗ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ‘ಮನೆ ಮನೆಗೆ ದೇವಲ ಸ್ಫೂರ್ತಿ’ ಮಾಸಿಕ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು.‘ದೇವಾಂಗೋ ದೇವ ಬ್ರಾಹ್ಮಣಃ’ ಎಂಬ ಪರಂಪರೆಯ ಮಹತ್ವವನ್ನು ವಿವರಿಸಿದ ಅವರು, ದೇವಾಂಗ ಸಮುದಾಯವು ಸಾಕ್ಷಾತ್ ಶ್ರೀಮನ್ನಾರಾಯಣನಿಗೆ ಯಜ್ಞೋಪವೀತವನ್ನು ಸಮರ್ಪಿಸಿದ ಪವಿತ್ರ ಪರಂಪರೆಯನ್ನು ಹೊಂದಿದೆ ಎಂಬ ಧಾರ್ಮಿಕ ನಂಬಿಕೆಯನ್ನು ಉಲ್ಲೇಖಿಸಿದರು. ಪೂರ್ವಜರು ರೂಪಿಸಿಕೊಟ್ಟ ಆಚಾರ-ವಿಚಾರಗಳು, ಸಂಪ್ರದಾಯಗಳು ಹಾಗೂ ಜೀವನಮೌಲ್ಯಗಳನ್ನು ಮರೆಯದೆ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಧುನಿಕ ಜೀವನಶೈಲಿಯ ಪ್ರಭಾವದಿಂದ ಸಾಂಸ್ಕೃತಿಕ ಬೇರುಗಳಿಂದ ವಿಮುಖರಾಗದೆ, ಪರಂಪರೆಯ ಹಿರಿಮೆಯನ್ನು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಸುನಂದ ನಾರಾಯಣಪ್ಪ ಗಾರ್ಘಿ ಅವರು ಮಾತನಾಡಿ, ಆದ್ಯ ವಚನಕಾರ ದೇವರ ದಾಸಿಮಯ್ಯನವರ ವಚನಗಳು ಹಾಗೂ ಅವರ ಜೀವನದ ಮಹತ್ವದ ಘಟನೆಗಳನ್ನು ವಿವರಿಸಿದರು. ದೇವರ ದಾಸಿಮಯ್ಯನವರ ವಚನಗಳಲ್ಲಿ ಅಡಕವಾಗಿರುವ ಭಕ್ತಿ, ಕಾಯಕನಿಷ್ಠೆ, ಮಾನವೀಯತೆ ಮತ್ತು ಜೀವನಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಾನಂದ ತಿಮ್ಮಾಪೂರ ಅವರು ಮಾತನಾಡಿ, ಸಮಾಜದ ಹಿರಿಯರು ಸಲ್ಲಿಸಿದ ಸೇವೆ ಹಾಗೂ ಅವರು ಹಾಕಿಕೊಟ್ಟ ಮಾರ್ಗವನ್ನು ಸ್ಮರಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು. ಇಂದು ಸಮಾಜದಲ್ಲಿ ಉತ್ತಮ ಸ್ಥಿತಿಯಲ್ಲಿರಲು ಹಿರಿಯರ ತ್ಯಾಗ, ಪರಿಶ್ರಮ ಮತ್ತು ಕೊಡುಗೆ ಅಪಾರವಾಗಿದೆ. ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಸಮಾಜವನ್ನು ನಿರ್ಮಿಸಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ. ಪ್ರಜ್ವಲ್ ಶ್ರೀನಿವಾಸ ವೀರಾಪುರ ಹಾಗೂ ಶ್ರೀಮತಿ ಅಮರಮ್ಮ ಕೋಚಿ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ದೇವಾಂಗ ಸಮಾಜದ ಅಧ್ಯಕ್ಷ ಈರಣ್ಣ ಬೆಟಿಗೇರಿ, ಕಾರ್ಯದರ್ಶಿ ವಸಂತಗೌಡ ಕೊಪ್ಪರದ, ಶಿವಪ್ರಸಾದ ಬೆನ್ನೂರ, ಹೆಬ್ಬಾಳ ಕುಟುಂಬದ ಸದಸ್ಯರು ಹಾಗೂ ಸಮಾಜದ ಗಣ್ಯರು ಉಪಸ್ಥಿತರಿದ್ದರು.

