ಪ್ರತಿ ಕುಟುಂಬಕ್ಕೆ 125 ದಿನ ಕೂಲಿ ಕೆಲಸ ಗ್ಯಾರಂಟಿ ಗಂಗಾವತಿ ತಾಪಂ ಇಒ ರಾಮರೆಡ್ಡಿ ಪಾಟೀಲ್ ಅವರ ಮಾಹಿತಿ ಕೂಲಿ ದರ 382 ರೂ.ಗೆ ಹೆಚ್ಚಳ…

ಗಂಗಾವತಿ : ಗ್ರಾಮೀಣ ಭಾಗದಲ್ಲಿ ಜನರಿಗೆ ಉದ್ಯೋಗ ಭದ್ರತೆ, ಜಲಸಂರಕ್ಷಣೆ, ಆಸ್ತಿ ಸೃಜನೆ ಹಾಗೂ ಜೀವನೋಪಾಯಕ್ಕಾಗಿ ಕಳೆದ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದ ಮನರೇಗಾ ಯೋಜನೆಯು ರದ್ದಾಗಿ ಮತ್ತಷ್ಟು ಪಾರದರ್ಶಕತೆ ಹಾಗೂ ತಂತ್ರಜ್ಞಾನದ ಬಳಕೆಯೊಂದಿಗೆ ಕೇಂದ್ರ ಸರ್ಕಾರವು ‘ವಿಕಸಿತ ಭಾರತ-ಜಿ ರಾಮ್ ಜಿ ಕಾಯ್ದೆ, 2025 ಅನ್ನು ಜುಲೈ 1 ರಿಂದ ದೇಶಾದ್ಯಂತ ಜಾರಿಗೊಳಿಸಿದೆ ಎಂದು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮರೆಡ್ಡಿ ಪಾಟೀಲ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವಿಕಸಿತ ಭಾರತ-ಜಿ ರಾಮ್ ಜಿ ಕಾಯ್ದೆಯು ಗ್ರಾಮೀಣ ಉದ್ಯೋಗ ಮತ್ತು ಅಭಿವೃದ್ಧಿಯ ಹೊಸ ಶಾಸನವಾಗಿದ್ದು, ಗ್ರಾಮೀಣ ಕುಟುಂಬಗಳಿಗೆ ಒಂದು ಆರ್ಥಿಕ ವರ್ಷದಲ್ಲಿ 125 ದಿನಗಳ ಕೌಶಲ್ಯರಹಿತ ಕೂಲಿ ಉದ್ಯೋಗದ ಶಾಸನಬದ್ಧ ಗ್ಯಾರಂಟಿಯನ್ನು ನೀಡುತ್ತದೆ. ಇದು ಗ್ರಾಮೀಣ ಭಾಗದಲ್ಲಿ ಉತ್ಪಾದಕ ಆಸ್ತಿಗಳ ಸೃಜನೆ ಮಾಡುವ ಮೂಲಕ ಗ್ರಾಮೀಣ ಅಭಿವೃದ್ಧಿಯನ್ನು ‘ವಿಕಸಿತ ಭಾರತ @2047’ ರ ದೃಷ್ಟಿಕೋನದೊಂದಿಗೆ ಜೋಡಿಸುವ ಗುರಿ ಹೊಂದಿದೆ. ಜುಲೈ 1, 2026 ರಿಂದ ಜಾರಿಗೆ ಬರುವಂತೆ ಹಳೆಯ ನರೇಗಾ ಕಾಯ್ದೆ ರದ್ದಾಗಿದ್ದು, ನೂತನ ‘ವಿಕಸಿತ ಭಾರಪ್ರತಿಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ) – VB-G RAM G’ ಕಾಯ್ದೆಯು ದೇಶದ ಎಲ್ಲಾ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ಜಾರಿಯಾಗಿದೆ. ಹೊಸ ಕಾಯ್ದೆ ಪ್ರಾರಂಭವಾದ ದಿನಾಂಕದಂದು ನರೇಗಾ ಅಡಿಯಲ್ಲಿ ಬಾಕಿ ಇರುವ ಅಥವಾ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಹೊಸ ಕಾಯ್ದೆಯ ನಿಯಮಾವಳಿಗಳ ಪ್ರಕಾರವೇ ಮುಂದುವರಿಸಬಹುದು. ಸಾರ್ವಜನಿಕ ಮತ್ತು ಸಮುದಾಯ ಆಸ್ತಿಗಳು ಅಪೂರ್ಣವಾಗದಂತೆ ತಡೆಯಲು ಈ ಕಾಮಗಾರಿಗಳನ್ನು ಸುಗಮವಾಗಿ ಹೊಸ ಯೋಜನೆಗೆ ವರ್ಗಾಯಿಸಿ, ಪೂರ್ಣಗೊಳಿಸಲು ಮೊದಲ ಆದ್ಯತೆ ನೀಡಲಾಗುತ್ತದೆ. ಹೊಸ ಕಾಯ್ದೆಯಡಿ ‘ಗ್ರಾಮೀಣ ರೋಜ್ಗಾರ್ ಗ್ಯಾರಂಟಿ ಕಾರ್ಡ್ಗಳನ್ನು’ವಿತರಿಸುವವರೆಗೆ, ಈಗಾಗಲೇ ಇ-ಕೆವೈಸಿ (e-KYC) ಪೂರ್ಣಗೊಂಡಿರುವ ಹಳೆಯ ನರೇಗಾ ಜಾಬ್ ಕಾರ್ಡ್ಗಳೇ ಸಿಂಧುವಾಗಿರುತ್ತವೆ. ಕೌಶಲ್ಯರಹಿತ ದೈಹಿಕ ಕೆಲಸ ಮಾಡಲು ಸ್ವಯಂಪ್ರೇರಿತರಾಗಿ ಮುಂದೆ ಬರುವ ವಯಸ್ಕ ಸದಸ್ಯರನ್ನು ಹೊಂದಿರುವ ಪ್ರತಿಯೊಂದು ಗ್ರಾಮೀಣ ಕುಟುಂಬವೂ ಈ ಯೋಜನೆಗೆ ಅರ್ಹವಾಗಿದೆ. ಹಳೆಯ ಜಾಬ್ ಕಾರ್ಡ್ ಹೊಂದಿಲ್ಲದ ಕುಟುಂಬಗಳು ಗ್ರಾಮ ಪಂಚಾಯಿತಿಗೆ ಸದಸ್ಯರ ಹೆಸರು, ವಯಸ್ಸು ಮತ್ತು ವಿಳಾಸದ ವಿವರ ನೀಡಿ ಹೊಸ ಕಾರ್ಡ್ ಆಗಿ ನೋಂದಾಯಿಸಿಕೊಳ್ಳಬಹುದು.ಉದ್ಯೋಗಕ್ಕಾಗಿ ಗ್ರಾಮೀಣ ವಯಸ್ಕ ಸದಸ್ಯರು ಗ್ರಾ.ಪಂ. ಅಧಿಕಾರಿಗಳು ಹಾಗೂ ಅಧಿಕೃತ ವ್ಯಕ್ತಿಗೆ ಮೌಖಿಕವಾಗಿ, ಲಿಖಿತವಾಗಿ (ಫಾರ್ಮ್ 6ರ ಮೂಲಕ) ಅಥವಾ ಡಿಜಿಟಲ್ ವೇದಿಕೆಗಳ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದ್ದಾರೆ.ಹೊಸ ಕಾಯ್ದೆಯ ಸೆಕ್ಷನ್ 10 ರ ನಿಬಂಧನೆಗಳ ಪ್ರಕಾರ ಕೇಂದ್ರ ಸರ್ಕಾರವು ಕೂಲಿ ದರವನ್ನು 382 ರೂಪಾಯಿಗಳಿಗೆ ಹೆಚ್ಚಳ ಮಾಡಿದೆ. ಕೂಲಿ ವೇತನವನ್ನು ವಾರಕ್ಕೊಮ್ಮೆ ಅಥವಾ ಯಾವುದೇ ಸಂದರ್ಭದಲ್ಲೂ ಮಸ್ಟರ್ ರೋಲ್ (ಹಾಜರಾತಿ ಪಟ್ಟಿ) ಮುಚ್ಚಿದ 15 ದಿನಗಳ ಒಳಗಾಗಿ ಕಡ್ಡಾಯವಾಗಿ ಪಾವತಿಸಬೇಕು. ವೇತನವನ್ನು ನೇರ ಸೌಲಭ್ಯ ವರ್ಗಾವಣೆ (DBT) ಮೂಲಕ ಕೂಲಿಕಾರರ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ವೈಯಕ್ತಿಕ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಎಲ್ಲ ಕೂಲಿಕಾರರು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು.ಮುಖದ ಗುರುತಿಸುವಿಕೆ (Face Authentication) ಹಾಜರಾತಿ: ಹೊಸ ಕಾಯ್ದೆಯಡಿ ಪಾರದರ್ಶಕತೆ ತರಲು ಕೆಲಸದ ಸ್ಥಳಗಳಲ್ಲಿ ಮುಖದ ಗುರುತಿಸುವಿಕೆ ಆಧಾರಿತ ತಂತ್ರಜ್ಞಾನದ (Face authentication-based attendance) ಮೂಲಕವೇ ಹಾಜರಾತಿ ದಾಖಲಿಸಲಾಗುತ್ತದೆ. ನೆಟ್ವರ್ಕ್ ಸಮಸ್ಯೆ, ತಾಂತ್ರಿಕ ತೊಂದರೆ ಅಥವಾ ಸಾಧನ (Device) ಕೆಟ್ಟುಹೋಗುವಂತಹ ಅಸಾಧಾರಣ ಮತ್ತು ನೈಜ ಸಂದರ್ಭಗಳಿಗಾಗಿ ಸರ್ಕಾರದ ಮಾರ್ಗಸೂಚಿಗಳನ್ವಯ ‘ವಿನಾಯಿತಿ ನಿರ್ವಹಣಾ ವ್ಯವಸ್ಥೆ’(Exception handling mechanism) ಕೂಡ ಲಭ್ಯವಿರುತ್ತದೆ. ಕೆಲಸದ ಸ್ಥಳದಲ್ಲಿ ಸುರಕ್ಷಿತ ಕುಡಿಯುವ ನೀರು, ಮಕ್ಕಳಿಗೆ ನೆರಳು, ವಿಶ್ರಾಂತಿ ಅವಧಿ ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆಯ (ಫಸ್ಟ್ ಏಡ್ ಬಾಕ್ಸ್) ಮೂಲಸೌಕರ್ಯಗಳನ್ನು ಒದಗಿಸುವುದು ಕಡ್ಡಾಯವಾಗಿದೆ.ಉದ್ಯೋಗವನ್ನು ಕೂಲಿಕಾರರ ಗ್ರಾಮದ 5 ಕಿಲೋಮೀಟರ್ ವ್ಯಾಪ್ತಿಯಲ್ಲೇ ನೀಡಲಾಗುತ್ತದೆ. ಒಂದು ವೇಳೆ 5 ಕಿ.ಮೀ ಗಿಂತ ದೂರದಲ್ಲಿ (ತಾಲ್ಲೂಕಿನ ಒಳಗಡೆ) ಉದ್ಯೋಗ ನೀಡಿದರೆ, ಸಾರಿಗೆ ಮತ್ತು ಜೀವನ ವೆಚ್ಚಕ್ಕಾಗಿ ಗಳಿಸಿದ ವೇತನದ ಜೊತೆಗೆ ಹೆಚ್ಚುವರಿ ಶೇ.10 ರಷ್ಟು ಹಣವನ್ನು ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ.ಕಾಯ್ದೆಯಡಿ ಕೈಗೊಳ್ಳುವ ಎಲ್ಲಾ ಕಾಮಗಾರಿಗಳು ಗ್ರಾಮಸಭೆಯಿಂದ ಅನುಮೋದಿಸಲ್ಪಟ್ಟ VGPP ಯಿಂದಲೇ ಆರಂಭವಾಗಬೇಕು. ಹೊಸ ಕಾಯ್ದೆಯಡಿಯೂ ಸಹ ಯಾವುದೇ ಕಾಮಗಾರಿಗಳ ಅನುಷ್ಠಾನಕ್ಕಾಗಿ ಗುತ್ತಿಗೆದಾರರನ್ನು (Contractors) ತೊಡಗಿಸಿಕೊಳ್ಳುವಂತಿಲ್ಲ. ಸಂಪೂರ್ಣವಾಗಿ ಮಾನವ ಶ್ರಮವನ್ನು (ಕೂಲಿಕಾರರನ್ನು) ಬಳಸಿ ಕೆಲಸ ನಿರ್ವಹಿಸಬೇಕು. ಮಾನವ ಶ್ರಮವನ್ನು ಕಸಿದುಕೊಳ್ಳುವ ಅಥವಾ ಕೂಲಿಕಾರರನ್ನು ಸ್ಥಾನಪಲ್ಲಟಗೊಳಿಸುವ ಭಾರಿ ಯಂತ್ರೋಪಕರಣಗಳನ್ನು ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಪ್ರತಿ ಕೆಲಸದ ಸ್ಥಳದಲ್ಲಿ ಕಾಮಗಾರಿಯ ವಿವರ, ಅಂದಾಜು ಮಾನವ ದಿನಗಳು, ಸಾಮಗ್ರಿಗಳ ಪ್ರಮಾಣ ಮತ್ತು ಐಟಂವಾರು ವೆಚ್ಚಗಳನ್ನು ಪ್ರದರ್ಶಿಸುವ ‘ಜನತಾ ಬೋರ್ಡ್’ಅಳವಡಿಸುವುದು ಕಡ್ಡಾಯವಾಗಿರುತ್ತದೆ ಎಂದು ತಾಪಂ ಇಓ ತಿಳಿಸಿದ್ದಾರೆ. *=========ಬಾಕ್ಸ್===============* *ಕೃಷಿ ಹಂಗಾಮಿನಲ್ಲಿ ಕಾಮಗಾರಿಗಳಿಲ್ಲ (60 ದಿನಗಳ ರಜೆ)* ಬಿತ್ತನೆ ಮತ್ತು ಕೊಯ್ಲು ಅವಧಿಗಳಂತಹ ಪ್ರಮುಖ ಕೃಷಿ ಹಂಗಾಮುಗಳಲ್ಲಿ ಕೃಷಿ ಕಾರ್ಮಿಕರ ಲಭ್ಯತೆಯನ್ನು ಸುಗಮಗೊಳಿಸಲು ಮತ್ತು ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ತಡೆಯಲು ರಾಜ್ಯ ಸರ್ಕಾರಗಳು ಕೃಷಿ ಹಂಗಾಮಿನ ಅವಧಿಯನ್ನು ಅಧಿಸೂಚಿಸುತ್ತವೆ. ಈ ಅವಧಿಯಲ್ಲಿ (ವರ್ಷದಲ್ಲಿ ಒಟ್ಟು 60 ದಿನಗಳ ಕಾಲ) ಕಾಯ್ದೆಯಡಿ ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ ಎಂದು ಇಒ ಅವರು ಮಾಹಿತಿ ನೀಡಿದ್ದಾರೆ. *==================ಕೋಟ್============* ಹೊಸ ಕಾಯ್ದೆಯು ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಯೋಜನೆಗಳ ಒಗ್ಗೂಡಿಸುವಿಕೆ ಮೂಲಕ “ಏಕ-ಯೋಜನೆ, ಬಹು-ಧನಸಹಾಯ” (Single-plan, multi-funding) ವಿಧಾನವನ್ನು ಉತ್ತೇಜಿಸುತ್ತದೆ. ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ನಿಯಮಗಳನ್ನು ಸಡಿಲಗೊಳಿಸಿ ಕಾಮಗಾರಿ ವಿಸ್ತರಿಸುವ ಹಾಗೂ ಕೂಲಿ ದಿನಗಳನ್ನು ಹೆಚ್ಚಿಸುವ ವಿಶೇಷ ಅಧಿಕಾರ ಹೊಂದಿದೆ. ಅಲ್ಲದೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (PMAY-G) ವಸತಿ ಕಾಮಗಾರಿಗಳಿಗೆ ಈ ಕಾಯ್ದೆಯಡಿ 90 ಮಾನವ ದಿನಗಳ ವೇತನ ಬೆಂಬಲವನ್ನು ಒದಗಿಸಲು ಅವಕಾಶ ನೀಡಲಾಗಿದೆ. ಆದರೆ, ಕಾಮಗಾರಿವಾರು ಸಾಮಗ್ರಿ ಮತ್ತು ಮಾನವ ದಿನಗಳ ನಿಖರ ಮಾಹಿತಿ ಮಾರ್ಗಸೂಚಿಗಳು ಕೇಂದ್ರದಿಂದ ಇನ್ನೂ ಬರಬೇಕಾಗಿದ್ದು, ಬಂದ ತಕ್ಷಣ ಈ ಬಗ್ಗೆ ಹೆಚ್ಚಿನ ಸ್ಪಷ್ಟತೆ ನೀಡಲಾಗುವುದು.- *ರಾಮರೆಡ್ಡಿ ಪಾಟೀಲ್, ತಾಪಂ ಇಓ ಗಂಗಾವತಿ*

