ವೆಂಕಟೇಶ ಕುರುಬರ್ ಕೊಲೆ ಪ್ರಕರಣ: ತೀರ್ಪು ಏಪ್ರಿಲ್ 30ಕ್ಕೆ ಮುಂದೂಡಿಕೆ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ – ಆರೋಪಿಗಳ ಹೇಳಿಕೆ ದಾಖಲೆ, ಸಾರ್ವಜನಿಕರಲ್ಲಿ ಕುತೂಹಲ ಹೆಚ್ಚಳ…

ಗಂಗಾವತಿ, ಏ.27: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ ಕುರುಬರ್ ಅವರ ಕೊಲೆ ಪ್ರಕರಣದ ವಿಚಾರಣೆಯನ್ನು ಸೋಮವಾರ ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಕೈಗೆತ್ತಿಕೊಂಡು, ಪರ ಹಾಗೂ ವಿರೋಧ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿ ಅಂತಿಮ ತೀರ್ಪನ್ನು ಏಪ್ರಿಲ್ 30ಕ್ಕೆ ಮುಂದೂಡಿತು.ಪೊಲೀಸರು, ವಕೀಲರು, ಆರೋಪಿಗಳು ಹಾಗೂ ಸಂತ್ರಸ್ತನ ಕುಟುಂಬಸ್ಥರಿಂದ ಕಿಕ್ಕಿರಿದು ತುಂಬಿದ್ದ ನ್ಯಾಯಾಲಯದಲ್ಲಿ ತೀರ್ಪು ಇದೇ ದಿನ ಹೊರಬೀಳುವ ನಿರೀಕ್ಷೆ ವ್ಯಕ್ತವಾಗಿತ್ತು. ಆದರೆ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಅವರು ವಿಚಾರಣೆಯ ಸಂದರ್ಭದಲ್ಲಿ ಎಲ್ಲಾ ವಾದಗಳನ್ನು ಆಲಿಸಿ, ವಕೀಲರ ಹೇಳಿಕೆಗಳನ್ನು ಸಮಗ್ರವಾಗಿ ದಾಖಲಿಸಿಕೊಂಡರು.ವಿಚಾರಣೆಯ ವೇಳೆ ಆರೋಪಿಗಳ ವೈಯಕ್ತಿಕ ಹೇಳಿಕೆಗಳನ್ನೂ ಪಡೆಯಲಾಯಿತು. ನಂತರ ಪ್ರಕರಣದ ಅಂತಿಮ ತೀರ್ಪನ್ನು ಏಪ್ರಿಲ್ 30ರಂದು ಪ್ರಕಟಿಸಲಾಗುವುದಾಗಿ ನ್ಯಾಯಾಧೀಶರು ತಿಳಿಸಿದರು. ಅಲ್ಲದೆ, ಆರೋಪಿಗಳು ವೈದ್ಯಕೀಯ ತಪಾಸಣೆಗೆ ಸಹಕರಿಸುವಂತೆ ಸೂಚನೆ ನೀಡಿದರು. ಆವರೆಗೆ ಆರೋಪಿಗಳನ್ನು ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲೇ ಇರಿಸಲು ಪೊಲೀಸರಿಗೆ ಆದೇಶಿಸಲಾಯಿತು.ಈ ಸಂದರ್ಭದಲ್ಲಿ 6ನೇ ಆರೋಪಿ ಗಂಗಾಧರ್ ಗೋಳಿ ಅವರು, “ಈ ಪ್ರಕರಣದಲ್ಲಿ ನಮ್ಮ ಯಾವುದೇ ಪಾತ್ರವಿಲ್ಲ. ನಮ್ಮನ್ನು ಯೋಜಿತವಾಗಿ ಸಿಲುಕಿಸಲಾಗಿದೆ” ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು.ಮೊದಲ ಆರೋಪಿ ರವಿ ತನ್ನ ಹೇಳಿಕೆಯಲ್ಲಿ, “ನಾನು ವೆಂಕಟೇಶನ ಸ್ನೇಹಿತನಾಗಿದ್ದೆ. ಈ ಕೊಲೆ ಪ್ರಕರಣದಲ್ಲಿ ನನ್ನ ಭಾಗವಹಿಸುವಿಕೆ ಇಲ್ಲ. ಕೆಲವರು ಮಾಡಿದ ತಪ್ಪುಗಳನ್ನು ನಮ್ಮ ಮೇಲೆ ಹೊರಿಸಲಾಗಿದೆ. ನಮ್ಮ ವಿರುದ್ಧ ಇರುವ ಇತರೆ ಪ್ರಕರಣಗಳನ್ನೂ ಸಮಗ್ರವಾಗಿ ಪರಿಶೀಲಿಸಬೇಕು. ನಮಗೂ ಕುಟುಂಬವಿದೆ, ಚಿಕ್ಕ ಮಕ್ಕಳು ಇದ್ದಾರೆ” ಎಂದು ನ್ಯಾಯಾಲಯದ ಗಮನಕ್ಕೆ ತಂದರು.ಇನ್ನೊಂದೆಡೆ, ವೆಂಕಟೇಶ ಅವರ ಕುಟುಂಬಸ್ಥರ ಹೇಳಿಕೆಗಳನ್ನೂ ನ್ಯಾಯಾಲಯ ದಾಖಲಿಸಿಕೊಂಡಿದೆ. ಎರಡೂ ಪಕ್ಷಗಳ ವಾದ-ಪ್ರತಿವಾದಗಳ ಆಧಾರದ ಮೇಲೆ ಏಪ್ರಿಲ್ 30ರಂದು ಹೊರಬೀಳಲಿರುವ ತೀರ್ಪಿನ ಬಗ್ಗೆ ಸಾರ್ವಜನಿಕರಲ್ಲಿ ಕುತೂಹಲ ಹೆಚ್ಚಾಗಿದೆ.
