ಮಹಿಳಾ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶ..

ಮಹಿಳಾ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶ..

ಗಂಗಾವತಿ.ಕರ್ನಾಟಕ ದಲಿತ ಮಹಿಳಾ ಒಕ್ಕೂಟ ಹಾಗೂ ಪ್ರೊ.ಬಿ.ಕೃಷ್ಣಪ್ಪನವರ ನೇತೃತ್ವದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಹಯೋಗದಲ್ಲಿ ಮಾತೆ ರಮಾಬಾಯಿ ಅಂಬೇಡ್ಕರ್, ಸಾವಿತ್ರಿ ಬಾಯಿ ಪುಲೆಯವರ ಜನ್ಮ ದಿನಾಚರಣೆಯ ಅಂಗವಾಗಿ ಚಿಕ್ಕಬಳ್ಳಾಪುರದಲ್ಲಿ ಮಹಿಳಾ ಕಾರ್ಯಕರ್ತರ ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ನಡೆಸಲಾಗುವುದು ಎಂದು ಸಂಘಟನೆಯ ವಿಭಾಗ ಸಂಚಾಲಕ ಹಂಪೇಶ್ ಹರಿಗೋಲ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಸಂಘಟನೆಯ ಕಾರ್ಯಕರ್ತರ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡ ಆಮಂತ್ರಣ ಬಿಡುಗಡೆ ಹಾಗೂ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.ಸಂವಿಧಾನ ಶಿಲ್ಪಿಯಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪತ್ನಿಯಾಗಿರುವ ಮಾತೆ ರಮಾಬಾಯಿಯವರು ಕಷ್ಟದ ಜೀವನದಲ್ಲಿ ಕೂಡ ಅಂಬೇಡ್ಕರ್ ಅವರ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯನ್ನು ಮಾಡದೆ ಪ್ರೋತ್ಸಾಹವನ್ನು ನೀಡಿದ ಮಹಾನ್ ತಾಯಿಯಾಗಿದ್ದಾರೆ. ಅವರ ಪ್ರೋತ್ಸಾಹದಿಂದಾಗಿ ಅಂಬೇಡ್ಕರ್ ಅವರು ಸಾಕಷ್ಟು ಪದವಿಗಳನ್ನು ಪಡೆದುಕೊಂಡು ಸಂವಿಧಾನವನ್ನು ಸಹ ರಚನೆ ಮಾಡಿದ್ದರು. ಇನ್ನೂ ಮಹಿಳೆಯರು ಶಿಕ್ಷಣದಿಂದ ದೂರ ಇರಬೇಕು ಎನ್ನುವ ಕಾಲದಲ್ಲಿ ತಾಯಿ ಸಾವಿತ್ರಿಬಾಯಿ ಪುಲೆಯವರನ್ನು ಶಿಕ್ಷಣವನ್ನು ಕಲಿತುಕೊಳ್ಳುವುದರ ಪ್ರತಿಯೊಬ್ಬ ಮಹಿಳೆಯು ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದು ಸಂದೇಶವನ್ನು ಸಾರಿದ ಮಹಾನ್ ಮಹಿಳೆ ಸಾವಿತ್ರಿಬಾಯಿ ಪುಲೆಯಾಗಿದ್ದಾರೆ. ಇವರಿಬ್ಬರ ಜನ್ಮ ದಿನಾಚರಣೆಯ ಅಂಗವಾಗಿ ಸಂಘಟನೆಯ ನೇತೃತ್ವದಲ್ಲಿ ಯುವ ಪೀಳಿಗೆಗೆ ಅವರ ಆದರ್ಶಗಳನ್ನು, ಸಿದ್ದಾಂತಗಳನ್ನು ತಿಳಿಸಿ, ಜಾಗೃತಿ ಮೂಡಿಸುವ ಸಲುವಾಗಿ ಮಹಿಳಾ ಕಾರ್ಯಕರ್ತರ ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ನಡೆಸಲಾಗುತ್ತಿದೆ. ಫೆ.27,2026 ರಂದು ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ ರಾಜ್ಯ ಸಮಾವೇಶ ನಡೆಯಲಿದೆ. ರಾಜ್ಯದ ನಾನಾ ಜಿಲ್ಲೆಗಳಲ್ಲಿ ಸಮಾವೇಶದಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಅದೇ ರೀತಿಯಾಗಿ ಕೊಪ್ಪಳ ಜಿಲ್ಲೆಯ ಎಲ್ಲಾ ಕಾರ್ಯಕರ್ತರು ಸಹ ರಾಜ್ಯದ ಮಟ್ಟದ ಸಮಾವೇಶದಲ್ಲಿ ಭಾಗವಹಿಸಬೇಕ ಎಂದು ಹೇಳಿದರು. ನಂತರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.ಸಂಘಟನೆಯ ಜಿಲ್ಲಾ ಖಜಾಂಚಿ ಯಮನೂರಪ್ಪ ನಾಯಕ ಹುಲಿಹೈದರ, ತಾಲೂಕು ಕಾರ್ಯದರ್ಶಿ ಯಮನೂರಪ್ಪ, ತಾಲೂಕು ಉಪಾಧ್ಯಕ್ಷ ಗೋವಿಂದಪ್ಪ ಸಂಗಾಪೂರ, ತಾಲೂಕು ಅಧ್ಯಕ್ಷ ದುರುಗಪ್ಪ ಹೊಸಳ್ಳಿ, ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಪಾರ್ವತಮ್ಮ ಹರಿಗೋಲ, ಜಿಲ್ಲಾ ಕಾರ್ಯದರ್ಶಿ ಹನುಮಂತಪ್ಪ ಬಳ್ಳಾರಿ ಹಾಗೂ ಇತರರ ಉಪಸ್ಥಿತಿ ಇದ್ದರು.

Leave a Reply

Your email address will not be published. Required fields are marked *