ನೂತನ 12*7 ಬೊಲೆರೊ ನಿರ್ವಹಣಾ ವಾಹನಕ್ಕೆ ಚಾಲನೆ ನೀಡಿದ ಶಾಸಕ ಜೆ.ಎನ್.ಗಣೇಶ.

ನೂತನ 12*7 ಬೊಲೆರೊ ನಿರ್ವಹಣಾ ವಾಹನಕ್ಕೆ ಚಾಲನೆ ನೀಡಿದ ಶಾಸಕ ಜೆ.ಎನ್.ಗಣೇಶ.

ಕಂಪ್ಲಿ :ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ಶಾಸಕರ ಕಚೇರಿ ಮುಂಭಾಗದಲ್ಲಿ ಸಾರ್ವಜನಿಕರ ವಿದ್ಯುತ್ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ, ಕಂಪ್ಲಿ ವಿದ್ಯುತ್ ಉಪವಿಭಾಗಕ್ಕೆ ಮಂಜೂರಾದ ನೂತನ 12*7 ಬೊಲೆರೊ ಕಾರ್ಯಾಚರಣೆ ಮತ್ತು ನಿರ್ವಹಣೆಯ ವಾಹನಕ್ಕೆ ಶಾಸಕ ಜೆ.ಎನ್.ಗಣೇಶ್ ಮಂಗಳವಾರ ಚಾಲನೆ ನೀಡುವ ಮೂಲಕ ಲೋಕಾರ್ಪಣೆಗೊಳಿಸಿದರು. ಶಾಸಕ ಗಣೇಶ ಅವರು ಮಾತನಾಡಿ, ವಿದ್ಯುತ್ ಸಮಸ್ಯೆಗಳು, ಕಂಬಗಳು ಬಿದ್ದಿರುವುದು, ವಿದ್ಯುತ್ ಕಡಿತ, ಮತ್ತು ಇತರ ವಿದ್ಯುತ್ ಸಂಬಂಧಿತ ದೂರುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಕೆಲಸವಾಗುತ್ತದೆ. ವಿದ್ಯುತ್‌ಗೆ ಸಂಬAಧಿಸಿದ ಸಮಸ್ಯೆಗಳು ಹಾಗೂ ದೂರುಗಳಿದ್ದಲ್ಲಿ ಗ್ರಾಹಕರು 1912ಗೆ ಕರೆ ಮಾಡಿ ತಿಳಿಸಬಹುದಾಗಿದೆ. ಆ ಮೂಲಕ ಜೆಸ್ಕಾಂ ಸಿಬ್ಬಂದಿ ಸಮಸ್ಯೆಗೆ ಕೂಡಲೇ ಸ್ಪಂದಿಸಲಿದ್ದಾರೆ ಎಂದರು. ನಂತರ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ಎಇಇ) ಶ್ರೀನಿವಾಸ ಪ್ರಸಾದ್ ಕೆ ಮಾತನಾಡಿ, ತ್ವರಿತ ದೂರು ಪರಿಹಾರ ಮತ್ತು ಸಾರ್ವಜನಿಕರಿಂದ ಬರುವ ವಿದ್ಯುತ್ ವ್ಯತ್ಯಯದ ದೂರುಗಳಿಗೆ ಲೈನ್ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ತಲುಪಲು ಈ ವಾಹನ ಸಹಕಾರಿಯಾಗಲಿದೆ. ದಿನದ 12*7 ಗಂಟೆಯೂ ತುರ್ತು ನಿರ್ವಹಣಾ ಕಾರ್ಯಗಳಿಗಾಗಿ ಈ ವಾಹನ ಸನ್ನದ್ಧವಾಗಿರುತ್ತದೆ. ಸುರಕ್ಷಿತ ಪರಿಕರಗಳ ಸಾಗಣೆ ಮತ್ತು ವಿದ್ಯುತ್ ಕಂಬ, ಟ್ರಾನ್ಸ್ಫಾರ್ಮರ್ ದುರಸ್ತಿಗೆ ಬೇಕಾಗುವ ಅಗತ್ಯ ಉಪಕರಣಗಳು ಹಾಗೂ ಸುರಕ್ಷತಾ ಕವಚಗಳನ್ನು ಹೊತ್ತೊಯ್ಯಲು ಅನುಕೂಲಕರವಾಗಿದೆ. ಗ್ರಾಮೀಣ ಭಾಗಕ್ಕೆ ಸುಲಭ ಸಂಪರ್ಕಿಸಲು ಸಾಧ್ಯ. ತುರ್ತು ವಿದ್ಯುತ್ ಅನಾಹುತಗಳನ್ನು ತಡೆಗಟ್ಟಲು ಮತ್ತು ಶೀಘ್ರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಆನೆಯ ಬಲ ಬಂದಂತಾಗಿದೆ. ಸಾರ್ವಜನಿಕರು ವಿದ್ಯುತ್ ಸಮಸ್ಯೆಗಳಿದ್ದಲ್ಲಿ ಇಲಾಖೆಯ ಗಮನಕ್ಕೆ ತಂದು, ಈ ಹೊಸ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಜೂಗಲ್ ಮಂಜುನಾಯಕ, ಸಹಾಯಕ ಇಂಜಿನಿಯರ್(ಎಇ)ಗಳಾದ ವಿನೋದ್ ಕುಮಾರ್, ಭೀಮೇಶ್, ಶ್ರೀನಿವಾಸ್, ಜೆಇ ಮಹಾಂತೇಶ್ ಹಾಗೂ ಉಪವಿಭಾಗದ ಎಲ್ಲಾ ಶಾಖಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *