ಸಂಭ್ರಮದ ಬಡೇಸಾಹೇಬ್ ಖಾದ್ರಿ ದರ್ಗಾ ಉರುಸ್…

ಕಂಪ್ಲಿ: ಪಟ್ಟಣದ ಗಂಗಾವತಿ ರಸ್ತೆಯಲ್ಲಿರುವ ಪ್ರಸಿದ್ಧ ಹಜರತ್ ಸೈಯ್ಯದ್ ಷಾಹ್ ಮುಸ್ತಫಾ ಖಾದ್ರಿ ನೂರೇ ತಜಲ್ಲಿಯಾ ಹಜರತ್ ಬಡೇಸಾಹೇಬ್ ಖಾದ್ರಿ ದರ್ಗಾದಲ್ಲಿ ಹಜರತ್ ಸೈಯದ್ ಷಾಹ್ ಮುಸ್ತಾಫಾ ಖಾದ್ರಿ ನೂರೇ ತಜಲ್ಲಿಯ ರಹಮತುಲ್ಲಾ ಅಲೈ ಅವರ 238ನೇ ಉರುಸ್ ಗುರುವಾರ ವಿಜೃಂಭಣೆಯಿಂದ ನಡೆಯಿತು. ಮುಸ್ಲಿಂ ಧರ್ಮಗುರು ಸೈಯ್ಯದ್ ಷಾಹ್ ಅಬುಲ್ ಹಸನ್ ಖಾದ್ರಿಯವರ ಸಾನ್ನಿಧ್ಯದಲ್ಲಿ ಬೆಳಗಿನ ಜಾವದಲ್ಲಿ ಗಂಧ ಉತ್ಸವ, ನಂತರ ಉರುಸ್ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು. ಬಡೇ ಸಾಹೇಬ್ ಖಾದ್ರಿ ದರ್ಗಾಕ್ಕೆ ಸಾಕಷ್ಟು ಭಕ್ತರು ಬಟ್ಟೆ, ಹೂವಿನ ಚಾದರ್ ಅರ್ಪಿಸುವ ಮೂಲಕ ತಮ್ಮ ಕಷ್ಟಗಳನ್ನು ದೂರ ಮಾಡುವಂತೆ ಪ್ರಾರ್ಥಿಸಿದರು. ನಂತರ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಇಲ್ಲಿನ ಉರುಸ್ ಕಾರ್ಯಕ್ರಮದಲ್ಲಿ ಕಂಪ್ಲಿ, ಗಂಗಾವತಿ, ರಾಯಚೂರು, ಸಿಂಧನೂರು, ಬಳ್ಳಾರಿ, ಹೊಸಪೇಟೆ, ಕೊಪ್ಪಳ ಹಾಗೂ ನೆರೆ ರಾಜ್ಯದ ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಭಾಗದ ಭಕ್ತರು ಭಾಗವಹಿಸಿ, ದೇವರ ದರ್ಶನದೊಂದಿಗೆ ಭಕ್ತಿ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದರ್ಗಾದ ಸರ್ವ ಧರ್ಮದ ಶಿಷ್ಯಂದಿರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
