ಮಕ್ಕಳ ಹಕ್ಕುಗಳ ರಕ್ಷಣೆಗೆ ಮಹತ್ವದ ಪಾತ್ರ ..

ಕಂಪ್ಲಿ: ರಾಮಸಾಗರ ಗ್ರಾಮದಲ್ಲಿ ಮಂಗಳವಾರ ಗ್ರಾಪಂ ಅಧ್ಯಕ್ಷೆ ಶ್ರೀಮತಿ ಆಶಾ ಅಧ್ಯಕ್ಷತೆಯಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ ನಡೆಯಿತು. ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಸದಸ್ಯ ಎಚ್.ಸಿ.ರಾಘವೇಂದ್ರ ಮಾತನಾಡಿ, ಮಕ್ಕಳ ಆರೋಗ್ಯ, ಶಿಕ್ಷಣ ಸೇರಿ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಗ್ರಾಮಾಡಳಿತದ ಪಾತ್ರ ಮಹತ್ವದ್ದಾಗಿದೆ ಎಂದರು. ಪಿಡಿಒ ಮಲ್ಲಿಕಾರ್ಜುನ ಮಾತನಾಡಿ, ಮಕ್ಕಳು ಸಲ್ಲಿಸಿದ ಬೇಡಿಕೆಗಳನ್ನು ಹಂತಹಂತವಾಗಿ ಪರಿಹರಿಸಲಾಗುವುದು ಎಂದರು. ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕರಾದ ಸುಗ್ಗೇನಹಳ್ಳಿ ರಮೇಶ ಮಾತನಾಡಿ ಮಕ್ಕಳ ಹಕ್ಕುಗಳಾದ ಶಿಕ್ಷಣ, ಆರೋಗ್ಯ, ರಕ್ಷಣೆ ಮತ್ತು ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ನಡೆಸುವ ವಿಶೇಷ ಸಭೆಯಾಗಿದ್ದು, ಇದರಲ್ಲಿ ಮಕ್ಕಳು ತಮ್ಮ ಸಮಸ್ಯೆಗಳನ್ನು, ಬೇಡಿಕೆಗಳನ್ನು ಹೇಳಿ ಪರಿಹಾರಗಳನ್ನು ಕಂಡುಕೊಳ್ಳಲು ಅವಕಾಶ ನೀಡಲಾಗುತ್ತದೆ, ಬಾಲ ಕಾರ್ಮಿಕರಾಗದಂತೆ ದಿನಾಲು ಶಾಲೆಗೆ ಹಾಜರಾಗಬೇಕು, ಬಾಲ ವಿವಾಹದಂತಹ ಯಾವುದೇ ಘಟನೆ ನಿಮ್ಮ ಸುತ್ತಮುತ್ತ ನಡೆಯದಂತೆ ತಿಳಿಸಬೇಕು, ಈ ಸಭೆಗಳು ಮಕ್ಕಳಿಗೆ ತಮ್ಮ ಧ್ವನಿ ಕೇಳುವಂತೆ ಮಾಡುವುದು, ಮಕ್ಕಳ ಸ್ನೇಹಿ ಪಂಚಾಯಿತಿಗಳನ್ನು ನಿರ್ಮಿಸುವುದು ಮತ್ತು ಸರ್ಕಾರಿ ಯೋಜನೆಗಳ ಸದುಪಯೋಗ ಪಡೆಯಲು ಸಹಕಾರಿಯಾಗಿದೆ ಎಂದರು. ಇದಕ್ಕೂ ಮುನ್ನ ಮಕ್ಕಳು ಮಾತನಾಡಿ, ಕಂಪ್ಯೂಟರ್ ಶಿಕ್ಷಕರು, ಶುದ್ಧ ಕುಡಿವ ನೀರು, ಆಟದ ಮೈದಾನ ಸಮತಟ್ಟು, ವಿಜ್ಞಾನ ಪ್ರಾಯೋಗಾಲಯ, ಶೌಚಗೃಹ, ಶಾಲಾಮಕ್ಕಳ ಸಂಘ ಸಬಲೀಕರಿಸುವಂತೆ, ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಬೇಕೆಂದು ಕೋರಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆರ್. ಎಂ. ರಾಮಯ್ಯ, ಸದಸ್ಯರಾದ ಸೀಕ್ಲಿ ಸೋಮಶೇಖರ, ಮೌಲಾಸಾಬ, ಪ್ರೌಢಶಾಲಾ ಎಸ್. ಡಿ. ಎಂ. ಸಿ. ಅಧ್ಯಕ್ಷ ಕರಿಬಸಯ್ಯಸ್ವಾಮಿ, ಪ್ರಾಥಮಿಕ ಶಾಲಾ ಎಸ್. ಡಿ.ಎಂ. ಸಿ. ಅಧ್ಯಕ್ಷ ಪ್ರಶಾಂತ, ಸರಕಾರಿ ಪ್ರೌಢಶಾಲಾ ಪ್ರಭಾರಿ ಮುಖ್ಯ ಗುರುಗಳಾದ ರಾಮಮೋಹನ್, ಶಿಕ್ಷಕರು, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ಆಶಾ, ಅಂಗನವಾಡಿ ಕಾರ್ಯಕರ್ತರು, ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್
