ವೃಕ್ಷಮಾತೆಯಂತೆ ಸರ್ವರೂ ಗಿಡಮರಗಳನ್ನು ಪ್ರೀತಿಸಿದರೆ ಕಾಡು ಉಳಿಯಲು ಸಾಧ್ಯ: ನ್ಯಾಯಾಧೀಶ ಪಾಟೀಲ್.

ಸೂರ್ಯೋದಯ ವಾಕಿಂಗ್ ಕ್ಲಬ್ ಸದಸ್ಯರಿಂದ ಸಾಲುಮರದ ತಿಮ್ಮಕ್ಕನಿಗೆ ನುಡಿ ಶ್ರದ್ಧಾಂಜಲಿ*ಜೂನಿಯರ್ ಕಾಲೇಜ್ ಮೈದಾನದಲ್ಲಿರುವ ವೃಕ್ಷಗಳನ್ನು ಸಂರಕ್ಷಣೆಯ ಶಪಥ.

ಗಂಗಾವತಿ: ವೃಕ್ಷಮಾತೆ ಸಾಲುಮರದ ತಿಮ್ಮಕ್ಕನಂತೆ ಸರ್ವರೂ ಗಿಡ ಮರಗಳನ್ನು ಪ್ರೀತಿಸಿದರೆ. ಕಾಡು ನಾಡುಗಳನ್ನು ಸಂರಕ್ಷಣೆ ಮಾಡಲು ಸಾಧ್ಯವಾಗುತ್ತದೆ. ಯುವಜನರು ಸಾಲುಮರದ ತಿಮ್ಮಕ್ಕನಂತೆ ಸಸಿ ನೆಟ್ಟು ಬೆಳಸುವಂತೆ ಕರ್ನಾಟಕ ರಾಜ್ಯ ಭೂ ಕಬಳಿಕೆ ನ್ಯಾಯಮಂಡಳಿ ನ್ಯಾಯಾಧೀಶರಾದ ನಾಗನಗೌಡ ಪಾಟೀಲ್ ಹೇಳಿದರು.ಅವರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳ್ಳಂಬೆಳ್ಳಿಗೆ ಸೂರ್ಯೋದಯ ವಾಕಿಂಗ್ ಕ್ಲಬ್ ಸದಸ್ಯರು ಹಮ್ಮಿಕೊಂಡಿದ್ದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ನುಡಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ನಾನು ಅನೇಕ ಸಲ ಸಾಲುಮರದ ತಿಮ್ಮಕ್ಕನವರನ್ನು ಖುದ್ದು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನೆ. ಅವರು ಮೊದಲು ಕೇಳುವುದು ನೀವು ಯಾವ ಊರಿನವರು ನಿಮ್ಮೂರಿನ ಪಕ್ಕದಲ್ಲಿ ಕಾಡುಗಳಿವೆಯಾ ಎಂದು, ಇದರ ಅರ್ಥ ಕಾಡಿದ್ದರೆ ನಾಡು, ಜನರು ಬದುಕುಲು ಸಾಧ್ಯವಾಗುತ್ತದೆ. ಮಳೆ ಬರುತ್ತದೆ. ಪರಿಸರ ಸಮತೋಲನವಾಗಿರುತ್ತದೆ. ಮೊದಲು ಸಸಿ ನೆಟ್ಟು ಮರ ಬೆಳೆಸುವುದನ್ನು ಮಕ್ಕಳಿಗೆ ಕಲಿಸಿ ಎಂದು ತಿಮ್ಮಕ್ಕನವರು ಮನವಿ ಮಾಡುತ್ತಾರೆ. ಇಂತಹ ಪರಿಸರ ಪ್ರೇಮಿ 114 ವರ್ಷಗಳ ಸಾರ್ಥಕ ಜೀವನ ನಡೆಸಿ ವಿಶ್ವ ಇರುವವರೆಗೂ ಸ್ಮರಣೆಯಾಗುವಂತೆ ಬದುಕಿದ್ದಾರೆ. ಅವರಂತೆ ನಾವು ಸಹ ಕಾಡು, ಪರಿಸರವನ್ನು ಸಂರಕ್ಷಣೆ ಮಾಡುವ ಮೂಲಕ ಜೀವ ಸಂಕುಲಕ್ಕೆ ನೆರವಾಗಬೇಕೆಂದು ಕರೆ ನೀಡಿದರು.ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾದ ಕೆ.ನಿಂಗಜ್ಜ ಹಾಗೂ ಪ್ರೋ.ಎಸ್.ಕರಿಗೂಳಿ ಮಾತನಾಡಿ, ಸಾಲುಮರದ ತಿಮ್ಮಕ್ಕನವರು ಕೊನೆ ಉಸಿರು ಇರುವ ತನಕವೂ ಕಾಡು, ಗಿಡ ಮರಗಳ ಬಗ್ಗೆ ಚಿಂತನೆ ಮಾಡಿದ ಪರಿಸರ ತಾಯಿಯಾಗಿದ್ದರು. ಕೊನೆಯಲ್ಲಿ ಅವರು ಹೇಳಿದ ಮಾತನ್ನು ಅವರ ಪುತ್ರ ಉಮೇಶ ಪತ್ರದ ಮೂಲಕ ಇಡೀ ಮನುಜ ಕುಲಕ್ಕೆ ಕಾಡು ಬೆಳೆಸಬೇಕು. ಮಕ್ಕಳಿಗೆ ಅದನ್ನು ಕಲಿಸಬೇಕು. ಎಲ್ಲರ ಸಂತತಿ ಬೆಳೆಯುವಂತೆ ಕಾಳಜಿ ಇರುವ ಮಾತನ್ನು ತಿಳಿಸಿದ್ದು ಅತ್ಯಂತ ಸೂಕ್ತವಾಗಿದೆ. ಅವರಂತೆ ನಾವೆಲ್ಲ ಅವರ ಸ್ಮರಣೆಗಾಗಿ ಸರ್ವರೂ ಒಂದೊಂದು ಸಸಿ ನೆಟ್ಟು ಬೆಳೆಸಬೇಕೆಂದರು.

ಈ ಸಂದರ್ಭದಲ್ಲಿ ಸೂರ್ಯೋದಯ ವಾಕಿಂಗ್ ಕ್ಲಬ್ ಸದಸ್ಯರು, ಎಂಸಿಸಿ ಕ್ರೀಕೆಟ್ ತಂಡದ ಸದಸ್ಯರು ಸೇರಿ ಬೆಳ್ಳಿಗ್ಗೆ ವಾಯುವಿಹಾರಕ್ಕೆ ಆಗಮಿಸಿದ ಸಾರ್ವಜನಿಕರಿದ್ದರು.
