ಅಲ್ಪರಲ್ಲ ಯಾರೂ – ಶ್ರೇಷ್ಠರೇ ಸರ್ವರೂ ಎಂದ ಕೃಷ್ಣಭಕ್ತಿ ಸಂಭ್ರಮಿ ಕನಕದಾಸರು: ಪ್ರೊ.ಕರಿಗೂಳಿ…

ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ 08.11.2025ರಂದು ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು, ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಂಕ್ರಪ್ಪ ಎಂ. ರವರು ಎಷ್ಟೋ ಮಹನೀಯರು ಸಮಾಜದಲ್ಲಿ ವಿವಿಧ ಮಾರ್ಗದ ಮೂಲಕ ಸಮಾಜ ತಿದ್ದುತ್ತಾ ಬದಲಾವಣೆಗೆ ಕಾರಣರಾದರು ಆದರೆ ದಾಸ ಶ್ರೇಷ್ಠರಾದ ಕನಕದಾಸರು ಸಂಕೀರ್ತನೆಗಳ ಮೂಲಕ ಸಾರಿದ ಸಾಹಿತ್ಯವಿಂದು ದಾಸವಾಣಿಯಾಗಿದೆ ತನ್ಮೂಲಕ ಸಮಾಜದಲ್ಲಿರುವ ಅಸಮಾನತೆಗಳನ್ನು ತಿದ್ದುವ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಿದರು. ಪ್ರಾಂಶುಪಾಲರಾದ ಪ್ರೊ.ಕರಿಗೂಳಿ ಯವರು ಮಾತನಾಡುತ್ತ, ಮಾನವ ಜನಾಂಗಕ್ಕೆ ಅಂಟಿದ ಕೇಳಿರಿಮೆಯನ್ನು ಹೋಗಲಾಡಿಸಿದವರು ಕನಕದಾಸರು,ಜಗತ್ತಿನಲ್ಲಿ ಯಾರೂ ಕೂಡ ಅಲ್ಪರಲ್ಲ,ಎಲ್ಲರೂ ಶ್ರೇಷ್ಠರೇ ಭಕ್ತಿಯಲಿ ಹಾಗೂ ತನ್ನ ತಾನರಿಯುತ ಲೋಕಕ್ಕೆ ಹಿತಕಾರಿಯಾಗಬೇಕು ಎಂಬ ಪರೋಪಕಾರಿ ಸಂದೇಶ ನೀಡಿದ ಮಹಾತ್ಮರು ಕನಕದಾಸರು ಎಂದರು.

ಕನಕದಾಸರ ದಾಸವಾಣಿಯು ಭಕ್ತಿಮಯವಾಗಿ ಕಂಡರೂ ಕೂಡ ಒಂದು ಸ್ಥಾಪಿತ ವ್ಯವಸ್ಥೆಯನ್ನು ಪ್ರಶ್ನಿಸುವಂತಿದೆ ಹಾಗೂ ಸಮಾಜದಲ್ಲಿ ಬೇರುಬಿಟ್ಟ ಅಸಮಾನತೆಯನ್ನು ತೊಡೆದು ಮುಖ್ಯ ವಾಹಿನಿಯಲ್ಲಿ ಸೇರುವವರಿಗೆ ಇಂದಿಗೂ ಕೂಡ ವೈಚಾರಿಕವಾಗಿ ಕನಕರು ಆಸರೆಯಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.ಮಾನವೀಯತೆಯನ್ನು ಸಾರಲು ಹೊರಟ ಮಹಾತ್ಮರನ್ನು, ವಿಮೋಚಕರನ್ನು ಕುಲಾವರಣದಲ್ಲಿ ಬಂಧಿಸುವುದು ಸರಿಯಲ್ಲ ಎಂದರು. ದಾಸಶ್ರೇಷ್ಠರ ನೆನಪಿಗಾಗಿ ದಾಸವಾಳ ಸಸಿನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ವಿರುಪಾಕ್ಷ ಕೆ. ಡಾ.ಶಶಿಕುಮಾರ,ರವಿಕುಮಾರ ಹಾಗೂ ಸಿಬ್ಬಂದಿ ಜಬೀನಾ ಬೇಗಂ, ಸಹಾಯಕರು ಶಾಂತಿ ಹಾಗೂ ಶರಣಬಸವ ಹಾಜರಿದ್ದರು.

