ಅನಿರೀಕ್ಷಿತ ಮಳೆಗೆ ತೋಯ್ದು ಮೆಕ್ಕೆ ಜೋಳ : ನೆಲಕ್ಕೊರಗಿದ ಭತ್ತ ಬೆಳೆ : ಆತಂಕದಲ್ಲಿ ಅನ್ನದಾತರು

ಬಳ್ಳಾರಿ / ಕಂಪ್ಲಿ : ತಾಲ್ಲೂಕಿನಲ್ಲಿ ಸುರಿದ ಮಳೆಗೆ ಕಟಾವು ಮಾಡಿ ಒಣಗಿಸಲು ಹಾಕಿದ್ದ ಮೆಕ್ಕೆ ಜೋಳ ತೋಯ್ದು ತೊಪ್ಪೆಯಾಗಿದ್ದು, ಕಟಾವಿಗೆ ಬಂದಿದ್ದ ಭತ್ತದ ಬೆಳೆ ನೆಲಕ್ಕೊರಗಿದೆ.
ಕಳೆದ ವಾರ ಸೈಕ್ಲೋನ್ ಅಪ್ಪಳಿಸಿದ್ದರಿಂದ ಕಟಾವು ಮಾಡಿದ ಭತ್ತವೂ ಸೇರಿದಂತೆ ಮೆಕ್ಕೆಜೋಳ ಮತ್ತು ಇತರೆ ಬೆಳೆಗಳು ತೋಯ್ದು ರೈತರು ಅಪಾರ ನಷ್ಟವನ್ನು ಅನುಭವಿಸಿದ್ದರು. ನಂತರ ಕಣ್ಮರೆಯಾಗಿದ್ದ ಮಳೆ ದಿಢೀರನೆ ಪ್ರತ್ಯಕ್ಷವಾಗಿದ್ದು, ಕಟಾವು ಮಾಡಿ ಪಟ್ಟಣದ ಎಪಿಎಂಸಿ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳ ಬಯಲು ಪ್ರದೇಶ, ರಸ್ತೆಗಳಲ್ಲಿ ಒಣಗಲು ಹಾಕಿದ್ದ ಅಪಾರ ಪ್ರಮಾಣದ ಭತ್ತ ಮತ್ತು ಮೆಕ್ಕೆ ಜೋಳ ರಾಶಿಗಳು ತೋಯ್ದು ತೊಪ್ಪೆಯಾಗಿವೆ. ಮಳೆಯ ಲಕ್ಷಣಗಳು ಇಲ್ಲ ಎನ್ನುವ ಕಾರಣದಿಂದ ರೈತರು ಮೆಕ್ಕೆಜೋಳ ಹಾಗೂ ಭತ್ತವನ್ನು ಓಗಲು ಹಾಕಿದ್ದರು. ಅವುಗಳನ್ನು ರಾಶಿ ಮಾಡಿ ಸಂಗ್ರಹಿಸಿರಲಿಲ್ಲ. ದಿಢಿರನೇ ಮಳೆಯಾದ್ದರಿಂದ ರಾಶಿಗಳು ತೋಯ್ದು ತೊಪ್ಪೆಯಾಗಿವೆ.
ಈ ವರ್ಷದ ಮುಂಗಾರು ಹಂಗಾಮಿನಲ್ಲಿ ನಿರೀಕ್ಷೆಗೆ ಮೀರಿದ ಮಳೆಯಾದ್ದರಿಂದ ಭತ್ತವೂ ಸೇರಿದಂತೆ ವಿವಿಧ ಬೆಳೆಗಳು ಮಳೆಗೆ ಹಾನಿಯಾಗಿವೆ. ಈಗಾಗಲೇ ತಾಲ್ಲೂಕಿನಲ್ಲಿ ಶೇ.30ರಷ್ಟು ಭತ್ತದ ಕಟಾವು ಮುಗಿದಿದೆ ಇನ್ನು ಶೇ.70 ರಷ್ಟು ಭತ್ತದ ಕಟಾವು ಮಾಡಬೇಕಾಗಿದ್ದು, ಈ ನಡುವೆ ಮಳೆ ಆಗುತ್ತಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ. ಈಗಾಗಲೇ ಮುಮಗಾರು ಹಂಗಾಮಿನ ಭತ್ತದ ಬೆಳೆಯಿಂದ ತೀವ್ರವಾದ ನಷ್ಟಕ್ಕೊಳಗಾಗಿರುವ ರೈತರಿಗೆ ಎರಡನೇ ಬೆಳೆಗೆ ನೀರಿಲ್ಲ ಎನ್ನುವ ವಿಷಯ ಬರಸಿಡಿಲು ಬಡಿದಂತಾಗಿದೆ.
ಮಳೆ ಇದೇ ರೀತಿ ಮುಂದುವರಿದರೆ ಕಟಾವಿಗೆ ಬಂದಿರುವ ಭತ್ತದ ಬೆಳೆ ನೆಲ್ಲಕಚ್ಚುವುದಂತು ನಿಶ್ಚಯವಾಗಿದೆ. ಸರ್ಕಾರ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ಎರಡನೇ ಬೆಳೆಗೆ ನೀರೊದಗಿಸುವ ಮೂಲಕ ಅನ್ನದಾತರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್…
