ಸಿದ್ಧಪುರುಷರ ಗದ್ದುಗೆ ಜೀರ್ಣೋದ್ಧಾರಕ್ಕೆ ಭಕ್ತರು ಕೈಜೋಡಿಸಲಿ: ಶ್ರೀಗಳ ಮನವಿ…
ಗಂಗಾವತಿ: ನಾಡಿನಾದ್ಯಂತ ಪ್ರಚಲಿತವಿರುವ ದೇವಿ ಪುರಾಣದ ಕರ್ತೃ ರುವಾರಿಗಳಾದ ಶ್ರೀ ಚಿದಾನಂದ ಅವಧೂತರ ಶಕ್ತಿ ಪೀಠ ಹಾಗೂ ಕೊಂಡಪ್ಪಜ್ಜನವರ ಗದ್ದುಗೆಗಳ ಜೀರ್ಣೋದ್ಧಾರ ಕಾರ್ಯಕ್ಕೆ ಈ ಭಾಗದ ಎಲ್ಲಾ ಸದ್ಭಕ್ತರು ತನು, ಮನ, ಧನದಿಂದ ಸಹಕರಿಸಬೇಕು ಎಂದು ಐತಿಹಾಸಿಕ ಪುಣ್ಯಕ್ಷೇತ್ರ ನಂದಿಪುರ ಮಠದ ಡಾ,ಮಹೇಶ್ವರ ಮಹಾಸ್ವಾಮೀಜಿ ಮನವಿ ಮಾಡಿದ್ದಾರೆ.ಗಂಗಾವತಿ ಸಮೀಯ ಅಯೋಧ್ಯೆಯ ಭಾಗದಲ್ಲಿರುವ ಚಿದಾನಂದ ಅವಧೂತರ ಶಕ್ತಿಪೀಠ ಮತ್ತು ಕೊಂಡಪ್ಪಜ್ಜನವರ ಗದ್ದುಗೆಗಳನ್ನು ಅಭಿವೃದ್ಧಿಪಡಿಸುವ ಸದುದ್ದೇಶದಿಂದ ಸಾಹಿತಿ ಎಸ್.ವಿ.ಪಾಟಿಲ್ ಗುಂಡೂರ್ ಹಾಗೂ ಭಕ್ತರ ಸಹಭಾಗಿತ್ವದಲ್ಲಿ ಎರಡು ವರ್ಷಗಳ ಹಿಂದೆಯೇ ‘ಜೀರ್ಣೋದ್ಧಾರ ಸಮಿತಿ’ ಹಾಗೂ ‘ಸೇವಾ ಟ್ರಸ್ಟ್’ ರಚಿಸಲಾಗಿದೆ ಎಂದು ಅವರು ತಿಳಿಸಿದರು.ಆದಿಶಕ್ತಿಯನ್ನು ಸಾಕ್ಷಾತ್ಕಾರ ಮಾಡಿಕೊಂಡ ಮಹಾನ್ ಶಕ್ತಿಗಳಾದ ಚಿದಾನಂದ ಅವಧೂತರು ಮತ್ತು ಕೊಂಡಪ್ಪಜ್ಜನವರ ಚರಿತ್ರೆ ಹಾಗೂ ಅವರ ಗದ್ದುಗೆಗಳು ಜಗದ್ವಿಖ್ಯಾತಿಯಾಗಬೇಕಾದರೆ, ಅವುಗಳ ಜೀರ್ಣೋದ್ಧಾರ ಕಾರ್ಯ ಅತ್ಯಗತ್ಯವಾಗಿದೆ. ನಾಡಿನ ಉದ್ದಗಲಕ್ಕೂ ಈ ಮಹಾತ್ಮರ ಚರಿತ್ರೆಯನ್ನು ಪ್ರಚಾರ ಮಾಡುವ ಹಾಗೂ ಗದ್ದುಗೆಗಳನ್ನು ಜೀರ್ಣೋದ್ಧಾರಗೊಳಿಸುವ ಶಕ್ತಿಯನ್ನು ಮಾತೆ ರಾಜರಾಜೇಶ್ವರಿಯು ಈ ಭಾಗದ ಎಲ್ಲಾ ಭಕ್ತರಿಗೆ ಕರುಣಿಸಲಿ ಎಂದು ಶ್ರೀಗಳು ಹಾರೈಸಿದರು.ಈ ಪವಿತ್ರ ಕೈಂಕರ್ಯದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿ, ಜೀರ್ಣೋದ್ಧಾರ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ. ಸಾಹಿತಿ ಎಸ್.ವಿ.ಪಾಟಿಲ್ ಗುಂಡೂರ,, ಖ್ಯಾತ ಚಲನಚಿತ್ರ ನಿರ್ದೇಶಕ ಆದಿತ್ಯ ಚಿಕ್ಕಣ್ಣವರ್, ಪ್ರಸಿದ್ದ ವಾಸ್ತು ತಜ್ಞ ಡಾ.ಕೆ.ಮಂಜುನಾಥ್ ಗಂಗಾವತಿ ಹಾಗೂ ಹಿರಿಯ ಪತ್ರಕರ್ತ, ಸುದ್ದಿ ಸಂಪಾದಕ ಪಿ.ದಶರಥ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದು, ಅವರೊಂದಿಗೆ ನಾವೆಲ್ಲರೂ ಸೇರಿ ಈ ಸಿದ್ದಿಕ್ಷೇತ್ರ ಅಭಿವೃದ್ಧಿಗೆ ಶ್ರಮಿಸೋಣ ಎಂದು ಅವರು ಭಕ್ತರಲ್ಲಿ ಕರೆ ನೀಡಿದರು.ಹೆಚ್ಚಿನ ಮಾಹಿತಿ ಹಾಗೂ ನೆರವಿಗಾಗಿ ಡಾ.ಮಹೇಶ್ವರ ಮಹಾಸ್ವಾಮೀಜಿ ದೇವಿ ಆರಾಧಕರು 9880520235, 9916161275 ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

