ಗಂಗಾವತಿ ತಹಸೀಲ್ದಾರ್ ಹುದ್ದೆಗೆ ಶ್ರೀಮತಿ ಯು ವಸಂತ ಕುಮಾರಿ ವರ್ಗಾವಣೆ – ಸರ್ಕಾರದ ಆದೇಶ…

📝 ವರದಿ (News Report):ಗಂಗಾವತಿ: ಗಂಗಾವತಿ ತಾಲೂಕು ತಹಸೀಲ್ದಾರ್ ಹುದ್ದೆಗೆ ಹೊಸ ಅಧಿಕಾರಿಯನ್ನು ಸರ್ಕಾರ ನೇಮಕ ಮಾಡಿದೆ. ಬೆಂಗಳೂರು ಉತ್ತರ ನಗರಪಾಲಿಕೆಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ಯು ವಸಂತ ಕುಮಾರಿ ಅವರನ್ನು ಗಂಗಾವತಿ ತಹಸೀಲ್ದಾರ್ (ಗ್ರೇಡ್-1) ಆಗಿ ವರ್ಗಾವಣೆ ಮಾಡಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ನರಸಿಂಹಮೂರ್ತಿ ಜಿ.ಕೆ ಅವರು ಆದೇಶ ಹೊರಡಿಸಿದ್ದಾರೆ.ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಗೊಂಡ ಅಧಿಕಾರಿಯು ತಮ್ಮ ಹೊಸ ಹುದ್ದೆಗೆ ವರದಿ ಮಾಡಿಕೊಂಡು ಕಂದಾಯ ಇಲಾಖೆಗೆ ಮಾಹಿತಿ ಸಲ್ಲಿಸಲು ಸೂಚಿಸಲಾಗಿದೆ.ಇದಕ್ಕೂ ಮೊದಲು ಗಂಗಾವತಿ ತಹಸೀಲ್ದಾರ್ ಆಗಿದ್ದ ಯು. ನಾಗರಾಜ ಅವರನ್ನು ಸರ್ಕಾರ ವರ್ಗಾಯಿಸಿದ ಹಿನ್ನೆಲೆ, ಕನಕಗಿರಿ ತಹಸೀಲ್ದಾರ್ ವಿಶ್ವನಾಥ ಮುರಡಿ ಅವರಿಗೆ ಗಂಗಾವತಿ ತಹಸೀಲ್ದಾರ್ ಹುದ್ದೆಯ ಪ್ರಭಾರ ವಹಿಸಲಾಗಿತ್ತು.ಇದೀಗ ಶ್ರೀಮತಿ ಯು ವಸಂತ ಕುಮಾರಿ ಅವರ ನೇಮಕದಿಂದ ಗಂಗಾವತಿ ತಾಲೂಕಿನಲ್ಲಿ ಆಡಳಿತಾತ್ಮಕ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.

