ಮುದುಕಪ್ಪಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ.

ಕಂಪ್ಲಿ: ಶಿಕ್ಷಣ ಕ್ಷೇತ್ರದ ಬೆಳವಣಿಗೆ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿ ವಿಷಯದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಗುರುತಿಸಿಕೊಂಡಿರುವ ತಾಲ್ಲೂಕಿನ ಚಿಕ್ಕಜಾಯಿಗನೂರು ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಮುದುಕಪ್ಪ ಇವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ತನ್ನದಾಗಿಸಿಕೊಂಡರು. ಇತ್ತೀಚೆಗೆ ಬಳ್ಳಾರಿ ನಗರದ ವಾಲ್ಮೀಕಿ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ ಪಡೆದರು.ಇಲ್ಲಿನ ಪ್ರೌಢಶಾಲೆಯಲ್ಲಿ ಹಲವು ವರ್ಷಗಳಿಂದ ಶಿಕ್ಷಕ ಸೇವೆಯಲ್ಲಿದ್ದಾರೆ. ಮೂಲತಃ ಬಡ ಕುಟುಂಬದಲ್ಲಿ ಬೆಳೆದ ಇವರು ಅಂಥ ಕಷ್ಟಗಳು ತಮ್ಮ ಕಣ್ಮುಂದಿರುವ ಮಕ್ಕಳಿಗೆ ಬರಬಾರದು ಎಂದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯದ ಕಡೆಗೆ ಹೆಜ್ಜೆ ಇಟ್ಟಿದ್ದಾರೆ. ಕಬ್ಬಿಣದ ಕಡಲೆ ಅಂತಿರುವ ಇಂಗ್ಲಿಷ್ ಅನ್ನು ಹಿಂದುಳಿದ ಮಕ್ಕಳಿಗೂ ಮನಮುಟ್ಟುವ ರೀತಿಯಲ್ಲಿ ಸ್ಮಾರ್ಟ್ ಕ್ಲಾಸ್‌ಗಳನ್ನು ಬಳಸಿಕೊಂಡು ಬೋಧನೆಯ ವಿವಿಧ ವೈವಿಧ್ಯಮಯ ಕೌಶಲಗಳನ್ನು ಬಳಸಿಕೊಂಡು ಮಕ್ಕಳಿಗೆ ಆತ್ಮಸ್ಥೈರ್ಯದ ಮೂಲಕ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಸಹಿತ ತರಗತಿಯಲ್ಲಿ ತೊಡಗಿಸಿಕೊಂಡಿರುವುದು ವಿಶೇಷ. ಮಕ್ಕಳಲ್ಲಿ ಶಿಸ್ತು, ಸಹನೆ, ಶಾಂತಿ, ಸಹಬಾಳ್ವೆ, ರಾಷ್ಟ್ರಪ್ರೇಮ, ಭಾವೈಕ್ಯ, ಸಹೋದರತ್ವ ಮೂಡಿಸುವ ನಿಟ್ಟಿನಲ್ಲಿ ಇವರ ಉತ್ತಮ ಪ್ರಯತ್ನ ಅಮೋಘದ ಜೊತೆಗೆ ಮಾದರಿಯಾಗಿದೆ. ಬಳ್ಳಾರಿ ಜಿಲ್ಲೆಯ ಸಂಪನ್ಮೂಲ ವ್ಯಕ್ತಿಯಾಗಿರುವ ಮುದುಕಪ್ಪ ಇವರು 2004ರಲ್ಲಿ ಹಾಸನ ತಾಲೂಕಿನ ಕಂದಲಿಯ ಮೊರಾರ್ಜಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ಮಾಡುತ್ತಿದ್ಧು. ನಂತರ 2006ರಲ್ಲಿ ಸಿಇಟಿ ಮೂಲಕ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕನಾಗಿ ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ಮಂಡ್ಯದಿಂದ ಶಿಕ್ಷಕ ವೃತ್ತಿ ಆರಂಭಿಸಿ, ಹತ್ತು ವರ್ಷ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಕಳೆದ ಒಂಬತ್ತು ವರ್ಷದಿಂದ ಕಂಪ್ಲಿ ತಾಲೂಕಿನಲ್ಲಿ ಹಂಪಾದೇವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಜಾಯಿಗನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಸ್ತುತ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಲಾಗುತ್ತಿರುವುದು ಗಮನಾರ್ಹವಾಗಿದೆ. ಇಂತಹ ಉತ್ತಮ ಸೇವಕರಿಗೆ ಇನ್ನಷ್ಟು ಪ್ರಶಸ್ತಿಗಳು ಒಲಿಯಲಿ ಎಂಬುದು ಶಿಕ್ಷಣ ಪ್ರೇಮಿಗಳ ಆಶಯವಾಗಿದೆ.ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಅವರ ಭವಿಷ್ಯವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಬೇಕೆಂಬ ನಿಟ್ಟಿನಲ್ಲಿ ಪ್ರೌಢಶಾಲಾ ಶಿಕ್ಷಕ ಮುದುಕಪ್ಪ ಅವರ ಆಶಯ ದೊಡ್ಡದ್ದಾಗಿದೆ. ಇವರ ಉತ್ತಮ ಕಾರ್ಯವೈಕರಿಗೆ ಸಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಒಲಿದು ಬಂದಿದೆ. ಇದರಿಂದ ಮತ್ತಷ್ಟು ಸೇವೆಗೆ ಉತ್ತೇಜನ ನೀಡಿದೆ. ಚಿಕ್ಕಜಾಯಿಗನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಬಿ.ಎಂ.ಗಾಯತ್ರಿದೇವಿ ಮತು ಎಸ್‌ಡಿಎಂಸಿಯವರು ಹಾಗೂ ಶಿಕ್ಷಕ ವೃಂದದವರು, ಪೊಷಕ ವರ್ಗದವರು ಹರ್ಷ ವ್ಯಕ್ಯಪಡಿಸಿದರು.ವರದಿ : ಜಿಲಾನಸಾಬ್ ಬಡಿಗೇರ್
