ಗಂಗಾವತಿ, ಗದಗನ್ನು ಕೈಲಾಸ ಮಾಡಿದ ಗಾನಯೋಗಿಗಳು: ಡಾ.ಪುಟ್ಟರಾಜ ಕವಿ ಗವಾಯಿಗಳು ಸಾಕ್ಷಾತ್ ಶಿವಸ್ವರೂಪ – ಕಲ್ಲಯ್ಯ ಅಜ್ಜನವರು…

ಗಂಗಾವತಿ, ಗದಗನ್ನು ಕೈಲಾಸ ಮಾಡಿದ ಗಾನಯೋಗಿಗಳು: ಡಾ.ಪುಟ್ಟರಾಜ ಕವಿ ಗವಾಯಿಗಳು ಸಾಕ್ಷಾತ್ ಶಿವಸ್ವರೂಪ – ಕಲ್ಲಯ್ಯ ಅಜ್ಜನವರು…

ಗಂಗಾವತಿ, ಸೆ.20:*ಲಿಂಗೈಕ್ಯ ತ್ರಿಭಾಷಾ ಕವಿ ಡಾ.ಪುಟ್ಟರಾಜ ಕವಿ ಗವಾಯಿಗಳವರ 16ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಗಂಗಾವತಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಜರುಗಿತು.ಗಂಗಾವತಿಯ ವಿಪ್ರನಗರದಲ್ಲಿರುವ ಗದಗ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶಾಖಾ ಆಶ್ರಮದಲ್ಲಿ ಸೋಮವಾರ ಚಾತುರ್ಮಾಸದ ಅನುಷ್ಠಾನದ ಪ್ರಯುಕ್ತ ಈಶ್ವರ ಮೂರ್ತಿಗೆ ಹಾಗೂ ಲಿಂಗೈಕ್ಯ ಡಾ.ಪುಟ್ಟರಾಜ ಕವಿ ಗವಾಯಿಗಳವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಳಿಕ ಆಶೀರ್ವಚನ ನೀಡಿದ ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ *ಪೂಜ್ಯ ಶ್ರೀ ಕಲ್ಲಯ್ಯ ಅಜ್ಜನವರು* ಮಾತನಾಡಿ,”ಸಾಕ್ಷಾತ್ ಶಿವಸ್ವರೂಪರಾದ ಡಾ.ಪುಟ್ಟರಾಜ ಕವಿ ಗವಾಯಿಗಳು ಮತ್ತು ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿಗಳು ಗಂಗಾವತಿ, ಗದಗನ್ನು ಕೈಲಾಸವನ್ನಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ರಾಜ-ಮಹಾರಾಜರ ಅರಮನೆಗೆ ಮಾತ್ರ ಸೀಮಿತವಾಗಿದ್ದ ಸಂಗೀತವನ್ನು ಜನಸಾಮಾನ್ಯರಿಗೆ ತಲುಪಿಸುವ ಮಹತ್ಕಾರ್ಯವನ್ನು ಗವಾಯಿಗಳು ಮಾಡಿದ್ದಾರೆ” ಎಂದು ಬಣ್ಣಿಸಿದರು.”ವಿಶೇಷವಾಗಿ ಅಂಧ, ಅನಾಥ, ನಿರ್ಗತಿಕ ಮಕ್ಕಳಿಗೆ ಗದಗ ವೀರೇಶ್ವರ ಪುಣ್ಯಾಶ್ರಮದ ಮೂಲಕ ಸಾಹಿತ್ಯ, ಸಂಗೀತ, ಪುರಾಣ, ಕಲೆಗಳನ್ನು ಉಚಿತವಾಗಿ ಕಲಿಸುವುದರ ಮೂಲಕ ಅಂತಹ ಮಕ್ಕಳನ್ನು ಸ್ವಾವಲಂಬಿಗಳಾಗಿ ಬದುಕುವಂತೆ ಮಾಡುವ ಉದ್ದೇಶವನ್ನು ಪುಟ್ಟರಾಜರು ನನಸಾಗಿಸಿದ್ದಾರೆ. ಪ್ರತಿಯೊಂದು ಮನೆಯಲ್ಲಿ ಒಬ್ಬ ಸಂಗೀತ ಕಲಾವಿದ ಜನಿಸಬೇಕು. ಪ್ರತಿಯೊಬ್ಬರೂ ಅಂಧ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವೀರೇಶ್ವರ ಪುಣ್ಯಾಶ್ರಮಕ್ಕೆ ಜೋಳಿಗೆ ಹಾಕಬೇಕು” ಎಂದು ಕರೆ ನೀಡಿದರು.”ಗಂಗಾವತಿಯಲ್ಲಿರುವ ಶಾಖಾ ಆಶ್ರಮವು ಮುಂದೊಂದು ದಿನ ಬೃಹತ್ ಶಕ್ತಿಪೀಠವಾಗಿ ಬೆಳೆಯಲಿದೆ ಎಂಬ ವಿಶ್ವಾಸವಿದೆ” ಎಂದು ಅವರು ನುಡಿದರು.ಕಾರ್ಯಕ್ರಮದ ನಂತರ ರೇವಣಕಿಯಲ್ಲಿ ತುಲಾಭಾರ ಸೇವೆ ಹಾಗೂ ಡಾ.ಪುಟ್ಟರಾಜ ಕವಿ ಗವಾಯಿಗಳವರ ರಥೋತ್ಸವ ಜರುಗಿತು. ನಂತರ ಗದಗ ವೀರೇಶ್ವರ ಪುಣ್ಯಾಶ್ರಮಕ್ಕೆ ತೆರಳುವ ಪ್ರಯುಕ್ತ ಗಂಗಾವತಿಯ ಶಿಷ್ಯವೃಂದದವರು ಪೂಜ್ಯರಿಗೆ ಬೀಳ್ಕೊಡುಗೆ ನೀಡಿದರು.ಈ ಸಂದರ್ಭದಲ್ಲಿ ಶಿಕ್ಷಕ ಮಲ್ಲಿಕಾರ್ಜುನಗೌಡ ಪಾಟೀಲ್ ಉಡುಮಕಲ್ ಸೇರಿದಂತೆ ಅನೇಕ ಶಿಷ್ಯರು, ಭಕ್ತರು ಉಪಸ್ಥಿತರಿದ್ದರು.

*ವರದಿ: ಜೋಗಿನ್ ರಮೇಶ್ ನಾಯಕ,

Leave a Reply

Your email address will not be published. Required fields are marked *