12ರಂದು ಜಿಲ್ಲೆಯಾದ್ಯಂತ ಪ್ರಜಾಸೇವಾ ಆಂದೋಲನ…
ಕೊಪ್ಪಳ: ಸಾರ್ವಜನಿಕರ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸಲು ಜಿಲ್ಲೆಯಾದ್ಯಂತ ಸೆ. 12ರಂದು ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ.ಇಟ್ನಾಳ ತಿಳಿಸಿದ್ದಾರೆ.ಪ್ರತಿ ತಿಂಗಳ 2ನೇ ಹಾಗೂ 4ನೇ ಶನಿವಾರ ಕಡ್ಡಾಯವಾಗಿ ಹೋಬಳಿ ಮಟ್ಟದಲ್ಲಿ ಆಂದೋಲನ ಸಭೆಗಳು ನಡೆಯಲಿವೆ. ತಾಲ್ಲೂಕಿನ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಆಯಾ ತಹಶೀಲ್ದಾರರು, ಪೊಲೀಸರು, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಪಾಲ್ಗೊಳ್ಳುವರು.ಕೊಪ್ಪಳ ತಾಲ್ಲೂಕಿನ ಅಳವಂಡಿಯ ಬಿ.ಆರ್.ಅಂಬೇಡ್ಕರ್ ಭವನ, ಗಂಗಾವತಿಯ ನಗರಸಭೆ ಕಾರ್ಯಾಲಯದ ಸಭಾಂಗಣ, ಯಲಬುರ್ಗಾದ ಬುದ್ಧ ಬಸವ ಅಂಬೇಡ್ಕರ್ ಭವನ, ಕುಷ್ಟಗಿ ತಾಲ್ಲೂಕಿನ ಹನುಮನಾಳದ ಮಹರ್ಷಿ ವಾಲ್ಮೀಕಿ ಸಮುದಾಯ ಭವನ, ಕನಕಗಿರಿ ತಾಲ್ಲೂಕಿನ ಹುಲಿಹೈದರ್ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣ, ಕಾರಟಗಿ ತಾಲ್ಲೂಕಿನ ಸಿದ್ದಾಪುರದ ಎಪಿಎಂಸಿ ಸಮುದಾಯ ಭವನ ಹಾಗೂ ಕುಕನೂರು ತಾಲ್ಲೂಕಿನ ಮಂಗಳೂರಿನ ಬಾಪೂಜಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಸಭೆಗಳು ನಡೆಯಲಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೋರಿದ್ದಾರೆ.

