ಗಮನ ಸೆಳೆದ ಮಹಿಳೆಯರ ತಮಟೆ ವಾದ್ಯ – ಗಂಗಾವತಿಯಲ್ಲಿ ವೈಭವದ ರಾಯರ 355ನೇ ಮಧ್ಯ ಆರಾಧನಾ ಮಹೋತ್ಸವ….

ಗಮನ ಸೆಳೆದ ಮಹಿಳೆಯರ ತಮಟೆ ವಾದ್ಯ – ಗಂಗಾವತಿಯಲ್ಲಿ ವೈಭವದ ರಾಯರ 355ನೇ ಮಧ್ಯ ಆರಾಧನಾ ಮಹೋತ್ಸವ….

ಗಂಗಾವತಿ: ನಗರದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಭಾನುವಾರ ಜರುಗಿದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ 355ನೇ ಮಧ್ಯ ಆರಾಧನಾ ಮಹೋತ್ಸವವು ವಿವಿಧ ವೈಶಿಷ್ಟ್ಯಗಳೊಂದಿಗೆ ಭಕ್ತಿ ಭಾವದಿಂದ ಸಂಪನ್ನಗೊಂಡಿತು.ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಮಹಾ ಮಂಗಳಾರತಿ ಸಮಯದಲ್ಲಿ ಮಹಿಳೆಯರು ಪ್ರಸ್ತುತಪಡಿಸಿದ ತಮಟೆ ವಾದ್ಯ ನೆರೆದಿದ್ದ ಅಪಾರ ಭಕ್ತ ಸಮೂಹದ ಗಮನ ಸೆಳೆಯಿತು. ಮಠದ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಮಹಿಳೆಯರಿಂದ ಸುಮಾರು 30 ನಿಮಿಷಗಳ ಕಾಲ ತಮಟೆ ವಾದ್ಯದ ಮೊಳಗುವಿಕೆಯೊಂದಿಗೆ ರಾಯರಿಗೆ ಸೇವೆ ಸಲ್ಲಿಸಿದ್ದು ವಿಶೇಷವಾಗಿತ್ತು. ತಮಟೆಯ ನಾದಕ್ಕೆ ಭಕ್ತರು ಮಂತ್ರಮುಗ್ಧರಾಗಿ ರಾಯರ ಅನುಗ್ರಹಕ್ಕೆ ಪಾತ್ರರಾದರು.ಇದಕ್ಕೂ ಪೂರ್ವದಲ್ಲಿ ಬೆಳಿಗ್ಗೆಯಿಂದಲೇ ರಾಯರ ಬೃಂದಾವನಕ್ಕೆ ವಿಶೇಷ ಅಭಿಷೇಕ, ಬೆಳ್ಳಿ ಕವಚ ಸಮರ್ಪಣೆ, ವಿವಿಧ ಹೂವುಗಳಿಂದ ಆಕರ್ಷಕ ಅಲಂಕಾರ ಮಾಡಲಾಗಿತ್ತು. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹೆಜ್ಜೆ ನಮಸ್ಕಾರ, ದೀಡು ನಮಸ್ಕಾರ ಸೇವೆ ಸಲ್ಲಿಸಿದ್ದು ಭಕ್ತಿ ಪಾರವಶ್ಯತೆಯನ್ನು ಹೆಚ್ಚಿಸಿತ್ತು.ಒಟ್ಟಾರೆ ಈ ಬಾರಿಯ ಆರಾಧನಾ ಮಹೋತ್ಸವ ವೈವಿಧ್ಯಮಯವಾಗಿ ಮತ್ತು ವಿಶೇಷವಾಗಿ ಕಂಡುಬಂದಿತು.ಕಾರ್ಯಕ್ರಮದ ಯಶಸ್ಸಿಗೆ ಪ್ರಧಾನ ಅರ್ಚಕ ಭೀಮಾಚಾರ್, ದೇವಸ್ಥಾನ ಪ್ರಮುಖ ಗುರುರಾಜ್ ಸಾಮವೇದಿ, ರಾಮಕೃಷ್ಣ ಜಾಗೀರದಾರ್, ವಿಷ್ಣು ತೀರ್ಥ ಹನುಮೇಶ್ ಸೇರಿದಂತೆ ವಿಪ್ರ ಸಮಾಜದ ಬಂಧುಗಳು ಹಾಗೂ ಮಠದ ಪದಾಧಿಕಾರಿಗಳು ಸಹಕರಿಸಿದರು.*ವರದಿ: ಗಂಗಾವತಿ*

Leave a Reply

Your email address will not be published. Required fields are marked *