ಗ್ಯಾರಂಟಿ ಯೋಜನೆಯಿಂದ ಯಾರು ಹೊರಗುಳಿಯಬಾರದು: ಹಜರತ್ ಹುಸೇನ್….

ಕನಕಗಿರಿ:* ಗ್ರಾಮೀಣ ಭಾಗದ ಅರ್ಹ ಫಲಾನುಭವಿಗಳು ರಾಜ್ಯ ಸರಕಾರದ ಯೋಜನೆಗಳಿಂದ ವಂಚಿತರಾಗದಂತೆ ಸೂಕ್ತ ಕ್ರಮವಹಿಸಿ ಎಂದು ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಹಜರತ್ ಹುಸೇನ್ ಅಧಿಕಾರಿಗಳಿಗೆ ತಿಳಿಸಿದರು.ಅವರು ತಾಲೂಕಿನ ಚಿಕ್ಕಡಂಕನಕಲ್ ಗ್ರಾ.ಪಂ ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ರಾ.ಪಂ ಯ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಹಾಗೂ ಫಲಾನುಭವಿಗಳ ಜೊತೆ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯದ ಅಡಿ ಪ್ರತಿ ತಿಂಗಳು ಪಡಿತರ ನೀಡಲಾಗುತ್ತಿದ್ದು, ನವೆಂಬರ್ನಿಂದ 75 ವರ್ಷ ಮೇಲಿನ ಹಿರಿಯ ನಾಗರಿಕರಿಗೆ ಮನೆ ಬಾಗಿಲಿಗೆ ಪಡಿತರ ತಲುಪಿಸಲು ಸರ್ಕಾರ ಅನ್ನ ಸುವಿಧಾ ಯೋಜನೆಯನ್ನು ಜಾರಿಗೆ ತಂದಿದೆ. ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಈ ಯೋಜನೆ ಆರಂಭಿಸಿದ್ದು, 75 ವರ್ಷ ಮೇಲ್ಪಟ್ಟವರು ಹಾಗೂ ಮನೆಯಲ್ಲಿ ಕೇವಲ ಒಬ್ಬ ಅಥವಾ ಇಬ್ಬರು ಹಿರಿಯರಷ್ಟೇ ಇರುವ ಕುಟುಂಬದ ಮನೆ ಬಾಗಿಲಿಗೆ ಪಡಿತರವನ್ನು ತಲುಪಿಸಬೇಕು ಎಂದು ಸೂಚಿಸಿದರು.ನಂತರ ಉಳಿದಂತೆ ಗೃಹ ಲಕ್ಷ್ಮೀ, ಯುವನಿಧಿ, ಗೃಹಜ್ಯೋತಿ ಹಾಗೂ ಶಕ್ತಿ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿ, ಸದರಿ ಯೋಜನೆಯ ಅನುಷ್ಠಾನದಲ್ಲಿ ಇರುವ ತಾಂತ್ರಿಕ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು.ಈ ವೇಳೆ ತಾಲೂಕು ಯೋಜನಾಧಿಕಾರಿ ಡಾ.ಹುಲುಗಪ್ಪ, ಸಿಡಿಪಿಓ ವಿರುಪಾಕ್ಷಿ, ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಜಗದೀಶ್ ರಾಥೋಡ್, ಜಗದೀಶ್ ಚನ್ನವೀರಪ್ಪ, ಭೀಮೇಶ್, ವಿರೇಶ್, ಯಮನೂರಪ್ಪ ಮತ್ತು ಗ್ಯಾರಂಟಿ ಯೋಜನೆಗಳ ವಿವಿಧ ಇಲಾಖೆಯ ಅಧಿಕಾರಿಗಳು, ನಿಕಟಪೂರ್ವ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ್, ತಾಲೂಕ ಪಂಚಾಯತ್ ವಿಷಯ ನಿರ್ವಾಹಕರಾದ ಕೊಟ್ರಯ್ಯ ಸ್ವಾಮಿ ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ರಮೇಶ್ ಈಳಿಗೇರ್ ವಾಲ್ಮೀಕಿ ಅಸ್ತ್ರ ನ್ಯೂಸ್ ಕನಕಗಿರಿ ತಾಲೂಕ ವರದಿಗಾರ 9035332032
