ವಡ್ಡರಹಟ್ಟಿಯ 2.31 ಎಕರೆ ಅನಧಿಕೃತ ಬಡಾವಣೆ ನಕ್ಷೆ ರದ್ದು – ಲೋಕಾಯುಕ್ತ ದೂರಿನ ಬೆನ್ನಲ್ಲೇ ತಾ.ಪಂ. ಇಒ ಖಡಕ್ ಕ್ರಮ, ಸಾರ್ವಜನಿಕರಿಗೆ ಖರೀದಿ ಬೇಡ ಎಂದ ಗ್ರಾ.ಪಂ…

ಗಂಗಾವತಿ, ಆ. 28: ತಾಲೂಕಿನ ವೆಂಕಟಗಿರಿ ಹೋಬಳಿ ವ್ಯಾಪ್ತಿಯ ವಡ್ಡರಹಟ್ಟಿ ಗ್ರಾಮದ ಸರ್ವೆ ನಂ. 34/3/2 ರ 2.31 ಎಕರೆ ಜಮೀನಿನಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ಬಡಾವಣೆಯ ನಕ್ಷೆಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಅಂತಿಮವಾಗಿ ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ.ಈ ಬಡಾವಣೆ ವಿರುದ್ಧ ಸಾಮಾಜಿಕ ಹೋರಾಟಗಾರ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ದೂರಿನ ಅನ್ವಯ ತಾಲೂಕು ಪಂಚಾಯಿತಿ *ನಡಾವಳಿ ಸಂ. ತಾಪಂಗಂ/ಲೋಕಾಯುಕ್ತ/ಸಿ.ಆರ್/2026-27/1848, ದಿನಾಂಕ 03-03-2026* ರಂದು ನಕ್ಷೆಯನ್ನು ರದ್ದುಪಡಿಸಿ, *ದಿನಾಂಕ 24-08-2026 ರ ನೆನಪೋಲೆ-1, ಪತ್ರ ಸಂ. 747* ರ ಮೂಲಕ ಗ್ರಾಮ ಪಂಚಾಯಿತಿಗೆ ಮುಂದಿನ ಕ್ರಮಕ್ಕೆ ಸೂಚಿಸಿದೆ.ಲೋಕಾಯುಕ್ತದಲ್ಲಿ *ದಿನಾಂಕ 14-07-2026 ರಂದು ನಡೆದ ವಿಚಾರಣೆಯ ನಂತರ* ಈ ಕ್ರಮ ಕೈಗೊಳ್ಳಲಾಗಿದ್ದು, ಇದು ಅಕ್ರಮ ಬಡಾವಣೆಗಳ ವಿರುದ್ಧದ ಹೋರಾಟಕ್ಕೆ ಸಿಕ್ಕ ಮೊದಲ ಜಯ ಎಂದು ಹೇಳಲಾಗುತ್ತಿದೆ.*ಇ-ಸ್ವತ್ತು ರದ್ದು ಪ್ರಕ್ರಿಯೆ ಆರಂಭ*ನಕ್ಷೆ ರದ್ದಾದ ಹಿನ್ನೆಲೆಯಲ್ಲಿ ಈ ಬಡಾವಣೆಯಲ್ಲಿ ಈಗಾಗಲೇ ಇ-ಸ್ವತ್ತು ವಿತರಿಸಿರುವ ಆಸ್ತಿಗಳನ್ನು ಹೊರತುಪಡಿಸಿ, ಬಡಾವಣೆ ಮಾಲೀಕರ ಹೆಸರಿನಲ್ಲಿ ಇರುವ ಉಳಿದ ಎಲ್ಲಾ ಆಸ್ತಿಗಳನ್ನು (ನಿವೇಶನಗಳನ್ನು) ರದ್ದುಪಡಿಸುವ ಪ್ರಕ್ರಿಯೆಯನ್ನು ಗ್ರಾಮ ಪಂಚಾಯಿತಿ ಆರಂಭಿಸಿದೆ ಎಂದು ತಾಲೂಕು ಪಂಚಾಯಿತಿ ಸ್ಪಷ್ಟಪಡಿಸಿದೆ.ಈ ಕುರಿತು ಪ್ರಕಟಣೆ ನೀಡಿರುವ *ವಡ್ಡರಹಟ್ಟಿ ಗ್ರಾ.ಪಂ. ಪಿಡಿಒ ಸುರೇಶ ಛಲವಾದಿ* ಅವರು, “ಸರ್ವೆ ನಂ. 34/3/2 ರ ಬಡಾವಣೆ ಅನಧಿಕೃತವಾಗಿದ್ದು, ಅದರ ನಕ್ಷೆಯನ್ನು ರದ್ದುಪಡಿಸಲಾಗಿದೆ. ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಸಂಬಂಧಪಟ್ಟ ಕಚೇರಿಯ ಗಮನಕ್ಕೆ ತಾರದೆ ಸದರಿ ಬಡಾವಣೆಯಲ್ಲಿ ನಿವೇಶನ ಖರೀದಿಗೆ ಮುಂದಾದಲ್ಲಿ, ಭವಿಷ್ಯದಲ್ಲಿ ಇ-ಸ್ವತ್ತು, ನೋಂದಣಿ, ಕಟ್ಟಡ ಪರವಾನಗಿ ಸಿಗದೇ ಉಂಟಾಗುವ ಎಲ್ಲಾ ಸಮಸ್ಯೆಗಳಿಗೆ ಖರೀದಿದಾರರೇ ನೇರ ಹೊಣೆಗಾರರಾಗಿರುತ್ತಾರೆ” ಎಂದು ಎಚ್ಚರಿಸಿದ್ದಾರೆ.*ಇನ್ನೂ ಬಾಕಿ ಇರುವ ಸರ್ವೆ ನಂ. 46 ರ ಅಕ್ರಮ ಲೇಔಟ್*ಇದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗಂಗಾವತಿ ನಗರಕ್ಕೆ ಹೊಂದಿಕೊಂಡಿರುವ *ಸರ್ವೆ ನಂ. 46 ರಲ್ಲಿನ ಬೃಹತ್ ಅನಧಿಕೃತ ಲೇಔಟ್* ಬಗ್ಗೆಯೂ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದು ದೂರುದಾರರು ಜೋಗಿನ್ ರಮೇಶ್ ನಾಯಕ ಆರೋಪಿಸಿದರು. ಸರ್ವೆ ನಂ. 34/3/2 ರಂತೆ ಸರ್ವೆ ನಂ. 46 ರ ಮೇಲೂ ಕೂಡಲೇ ಅದೇ ಮಾದರಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಅಕ್ರಮ ಬಡಾವಣೆಗಳಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ, ಸಾರ್ವಜನಿಕರಿಗೆ ಮೋಸವಾಗುತ್ತಿದ್ದು, ತಾಲೂಕು ಪಂಚಾಯಿತಿಯ ಈ ಕ್ರಮಕ್ಕೆ ನಾಗರಿಕ ವಲಯದಲ್ಲಿ ಸ್ವಾಗತ ವ್ಯಕ್ತವಾಗಿದೆ.

ವರದಿ: ಜೋಗಿನ್ ರಮೇಶ್ ನಾಯಕ, ಗಂಗಾವತಿ
