ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ಡಾ. ಅರ್ಚನಾ ಅವರ ದಾಸವಾಣಿಭಕ್ತಿ ಸಂಗೀತದಲ್ಲಿ ತಲೆದೂಗಿದ ಸಂಗೀತಾಸಕ್ತರು…
ಗಂಗಾವತಿ: ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ನಗರದ ಶ್ರೀ ಯೋಗೇಶ್ವರ ಯಾಜ್ಞವಲ್ಕ್ಯ ಮಂದಿರದ ಶ್ರೀ ಗಣೇಶೋತ್ಸವದ ಅಂಗವಾಗಿ ಮಂಗಳವಾರ ನಡೆದ ಬೆಂಗಳೂರಿನ ಖ್ಯಾತ ಹಿಂದೂಸ್ತಾನಿ ಗಾಯಕಿ ಡಾ. ಅರ್ಚನಾ ಅವರ ದಾಸವಾಣಿ ಸಂಗೀತ ಕಾರ್ಯಕ್ರಮ ಭಕ್ತರು ಹಾಗೂ ಸಂಗೀತಾಸಕ್ತರನ್ನು ಭಕ್ತಿಭಾವದಲ್ಲಿ ಮಂತ್ರಮುಗ್ಧರನ್ನಾಗಿಸಿತು.ಸುಮಾರು ಎರಡು ಗಂಟೆಗಳ ಕಾಲ ನಡೆದ ಸಂಗೀತ ಕಾರ್ಯಕ್ರಮದಲ್ಲಿ ದಾಸವರೇಣ್ಯರ ಭಕ್ತಿ ಸಾಹಿತ್ಯವನ್ನು ಮನಮೋಹಕವಾಗಿ ಪ್ರಸ್ತುತಪಡಿಸಿದ ಡಾ. ಅರ್ಚನಾ ಅವರು ಪಾಂಡುರಂಗ, ಶ್ರೀಕೃಷ್ಣ, ವೆಂಕಟರಮಣ ಸೇರಿದಂತೆ ವಿವಿಧ ದೇವರನಾಮಗಳನ್ನು ಭಾವಪೂರ್ಣವಾಗಿ ಹಾಡುವ ಮೂಲಕ ಶ್ರೋತೃಗಳ ಮನಸ್ಸಿಗೆ ಭಕ್ತಿಯ ಸ್ಪರ್ಶ ನೀಡಿದರು. ಅವರ ಗಾಯನಕ್ಕೆ ಶ್ರೋತೃಗಳು ತಲೆದೂಗುತ್ತಾ, ಭಕ್ತಿರಸದಲ್ಲಿ ಮಿಂದೆದ್ದರು.ಸಂಗೀತವು ಮನಸ್ಸಿಗೆ ನೆಮ್ಮದಿ ನೀಡುವ ಭಕ್ತಿಯ ಸೇತುವೆಈ ಸಂದರ್ಭದಲ್ಲಿ ಶ್ರೀ ಯೋಗೇಶ್ವರ ಯಾಜ್ಞವಲ್ಕ್ಯ ಸೇವಾ ಸಮಿತಿ ಅಧ್ಯಕ್ಷ ಮುರಳೀಧರ ಕುಲಕರ್ಣಿ ಮಾತನಾಡಿ, ಜೀವನದ ಜಂಜಾಟ ಹಾಗೂ ಒತ್ತಡಗಳ ನಡುವೆ ಮಾನಸಿಕ ನೆಮ್ಮದಿ ಪಡೆಯಲು ಭಕ್ತಿ ಮಾರ್ಗ ಬಹಳ ಪೂರಕವಾಗಿದೆ. ಭಕ್ತಿ ಸಂಗೀತವು ಮನಸ್ಸನ್ನು ಶಾಂತಗೊಳಿಸುವುದರ ಜೊತೆಗೆ ದೇವರ ಸ್ಮರಣೆಯತ್ತ ಕರೆದೊಯ್ಯುವ ಶಕ್ತಿಯನ್ನು ಹೊಂದಿದೆ. ದಾಸವಾಣಿಯಂತಹ ಕಾರ್ಯಕ್ರಮಗಳು ನಮ್ಮ ಪರಂಪರೆ ಮತ್ತು ಭಕ್ತಿಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.ಕಲಾವಿದರ ಪರಿಚಯ ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ಲಕ್ಷ್ಮಿಕಾಂತ್ ಹೇರೂರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕೀಬೋರ್ಡ್ನಲ್ಲಿ ರಾಮು ಕಂಪ್ಲಿ, ತಬಲಾದಲ್ಲಿ ರಾಘವೇಂದ್ರ ಗಂಗಾವತಿ ಹಾಗೂ ತಾಳವಾದ್ಯದಲ್ಲಿ ಪ್ರಹ್ಲಾದ ದಿಗ್ಗಾವಿ ಅವರು ಸಂಗೀತ ಸಾಥ್ ನೀಡಿದರು.ಕಾರ್ಯಕ್ರಮದಲ್ಲಿ ವಿಪ್ರ ಸಮಾಜದ ಬಾಂಧವರು, ಸಂಗೀತಾಸಕ್ತರು, ಭಜನಾ ಮಂಡಳಿಗಳ ಸದಸ್ಯರು, ಯುವಕರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದಾಸವಾಣಿಯ ಭಕ್ತಿರಸವನ್ನು ಸವಿದರು.

