ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ವಿರುದ್ಧ ಶಾಸಕ ಜನಾರ್ದನ್ ರೆಡ್ಡಿ ಏಕವಚನ ಬಳಕೆ – ಕಾಂಗ್ರೆಸ್ ಮುಖಂಡರಿಂದ ತೀವ್ರ ಆಕ್ರೋಶ ಹಾಗೂ ಉಗ್ರ ಹೋರಾಟದ ಎಚ್ಚರಿಕೆ…
ಗಂಗಾವತಿ: ವಿಧಾನಸಭಾ ಕ್ಷೇತ್ರದ ಜನಪ್ರಿಯ ನಾಯಕ ಹಾಗೂ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ವಿರುದ್ಧ ಶಾಸಕ ಗಾಲಿ ಜನಾರ್ದನ್ ರೆಡ್ಡಿ ಅವರು ಏಕವಚನದಲ್ಲಿ ಮಾತನಾಡುವುದನ್ನು ಮುಂದುವರಿಸಿದರೆ, ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಗಂಗಾವತಿ ಕಾಂಗ್ರೆಸ್ ಮುಖಂಡರು ಮತ್ತು ಇಕ್ಬಾಲ್ ಅನ್ಸಾರಿ ಅಭಿಮಾನಿಗಳ ಬಳಗ ಎಚ್ಚರಿಕೆ ನೀಡಿದೆ.ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಹಾಲಿ ಶಾಸಕರು ಬಳ್ಳಾರಿ ಪಾದಯಾತ್ರೆಯ ಸಂದರ್ಭದಲ್ಲಿ ಇಕ್ಬಾಲ್ ಅನ್ಸಾರಿ ಅವರ ಕುರಿತು ಹಗುರವಾಗಿ ಮತ್ತು ಏಕವಚನದಲ್ಲಿ ಹೇಳಿಕೆ ನೀಡಿರುವುದನ್ನು ತೀವ್ರವಾಗಿ ಖಂಡಿಸಿದರು. “ಮಾಜಿ ಸಚಿವರ ಬಗ್ಗೆ ಆಡಿಯೋ, ವಿಡಿಯೋ ಮಾಡಿದರೆ ನಿಮಗೇನು ತೊಂದರೆ? ಮೊದಲು ನಿಮ್ಮ ಆತ್ಮಸ್ಥೈರ್ಯವನ್ನು ನೀವೇ ಪರಿಶೀಲಿಸಿಕೊಳ್ಳಿ” ಎಂದು ಶಾಸಕರಿಗೆ ತಿರುಗೇಟು ನೀಡಿದರು.ಕ್ಷೇತ್ರದಲ್ಲಿ ಶಾಸಕರ ಅನುದಾನ ದುರುಪಯೋಗವಾಗಿದ್ದು, ಗಂಗಾವತಿಯಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ದೂರಿದ ಮುಖಂಡರು, ಬಳ್ಳಾರಿ ಶಾಸಕ ನಾಗೇಂದ್ರ ವಿರುದ್ಧ ಪಾದಯಾತ್ರೆ ಮಾಡಲು ಹೊರಟಿರುವ ಜನಾರ್ದನ್ ರೆಡ್ಡಿಯವರ ನಡೆಯನ್ನು ಲೇವಡಿ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ನಗರಸಭೆ ಸದಸ್ಯ ಮನೋಹರ ಸ್ವಾಮಿ ಹಿರೇಮಠ, “ಗಂಗಾವತಿ ಕ್ಷೇತ್ರದಲ್ಲಿ ಈಗಾಗಲೇ ದೇವಸ್ಥಾನದ ಹಣ ದುರ್ಬಳಿಕೆಯಾಗಿದ್ದು, ಇದರ ಬಗ್ಗೆ ಸಮಗ್ರ ಮತ್ತು ಸೂಕ್ತ ತನಿಖೆಯಾಗಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಇಲಿಯಾಸ್ ಖಾದ್ರಿ, ಪ್ರಮುಖರಾದ ಜುಬೇರ್, ಹುಸೇನಪ್ಪ ಹಂಚಿನಾಳ, ಅಜಯ್ ಕಮ್ಲಿ ಬಾಬಾ, ಮಂಜು ಹಂಚಿನಾಳ, ಬಾಬರ್, ರಿಯಾಜ್ ಮೊಹಮ್ಮದ್, ಅನ್ವರ್, ಮಂಜು ಕಲಾಲ್, ಮುಕ್ತಿಯಾರ್, ಸಜಿದ್ ವಲಿ ಸೇರಿದಂತೆ ಹಂಡೆಮಟ್ಟದ ಕಾಂಗ್ರೆಸ್ ಮುಖಂಡರು ಮತ್ತು ಇಕ್ಬಾಲ್ ಅನ್ಸಾರಿ ಅಭಿಮಾನಿಗಳು ಉಪಸ್ಥಿತರಿದ್ದರು.

