ಗಂಗಾವತಿ:-ಅಂತರಾಷ್ಟ್ರೀಯ ಕಲಾವಿದ ಎಂ. ವೆಂಕಟೇಶ್ ಕುಮಾರ್ ಮನವಿಗೆ ಸ್ಪಂದನೆ: ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಮರಳಿದ ಕಲ್ಲಯ್ಯ ಅಜ್ಜನವರು
ಗಂಗಾವತಿ, ದಿ: 08-10-2026 ಅಂದ ಅನಾಥರ ಬದುಕಿಗೆ ಬೆಳಕಾಗಿದ್ದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪ್ರಸ್ತುತ ಪೀಠಾಧಿಕಾರಿಗಳಾದ ಪೂಜ್ಯ ಶ್ರೀ ಕಲ್ಲಯ್ಯ ಅಜ್ಜನವರು ಗುರುವಾರದಂದು ಪುನಃ ಗಂಗಾವತಿಯಿಂದ ಗದುಗಿನ ಪುಣ್ಯಾಶ್ರಮಕ್ಕೆ ತೆರಳಿದರು.
ಕೆಲವು ತಿಂಗಳುಗಳ ಹಿಂದೆ ಪೀಠಾಧಿಕಾರಿಗಳಾಗಿದ್ದ ಕಲ್ಲಯ್ಯ ಅಜ್ಜನವರ ಮೇಲೆ ಕೆಲವು ಕಿಡಿಗೇಡಿಗಳು ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದರು. ಇದರಿಂದ ತೀವ್ರ ಬೇಸರಗೊಂಡಿದ್ದ ಶ್ರೀಗಳು, ಗಂಗಾವತಿಯಲ್ಲಿರುವ ತಮ್ಮ ಶಾಖಾ ಆಶ್ರಮದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಮೌನ ವ್ರತವನ್ನು ಕೈಗೊಳ್ಳುವ ಮೂಲಕ ವಾಸ್ತವ್ಯ ಹೂಡಿದ್ದರು.
ಶ್ರೀಗಳು ಗದುಗಿನ ಆಶ್ರಮಕ್ಕೆ ಮರಳಬೇಕು ಎಂದು ಭಕ್ತರು, ಶಿಷ್ಯರು ಹಲವು ಬಾರಿ ಮನವಿ ಮಾಡಿಕೊಂಡರೂ ಶ್ರೀಗಳು ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಗದುಗಿನ ರಾಜಗುರು ಶ್ರೀ ಗುರುಸ್ವಾಮಿಗಳು, ಅಂತರಾಷ್ಟ್ರೀಯ ಖ್ಯಾತಿಯ ಹಿಂದೂಸ್ತಾನಿ ಸಂಗೀತ ಕಲಾವಿದ ಪದ್ಮಶ್ರೀ ಪಂ. ಎಂ. ವೆಂಕಟೇಶ್ ಕುಮಾರ್, ಶ್ರೀ ವೀರೇಶ್ ಕಿತ್ತೂರು, ಶ್ರೀ ಕಲ್ಲಿನಾಥ ಶಾಸ್ತ್ರಿ ಸೇರಿದಂತೆ ಆಶ್ರಮದ ಹಿರಿಯರು ಹಾಗೂ ಅಪಾರ ಭಕ್ತಾದಿಗಳು ಗಂಗಾವತಿಗೆ ಆಗಮಿಸಿ ಶ್ರೀ ಕಲ್ಲಯ್ಯ ಅಜ್ಜನವರನ್ನು ಮನವೊಲಿಸಿದರು.
ಭಕ್ತರ ಪ್ರೀತಿ, ವಿಶ್ವಾಸ ಮತ್ತು ಗದುಗಿನ ರಾಜಗುರುಗಳು ಹಾಗೂ ವೆಂಕಟೇಶ್ ಕುಮಾರ್ ಅವರ ಮನವಿಗೆ ಸ್ಪಂದಿಸಿದ ಕಲ್ಲಯ್ಯ ಅಜ್ಜನವರು, ಇಂದು ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ತೆರಳಲು ಒಪ್ಪಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಆಶ್ರಮದಿಂದ ಬಂದ ಭಕ್ತರು ಅತ್ಯಂತ ಗೌರವಪೂರ್ವಕವಾಗಿ ಶ್ರೀಗಳನ್ನು ಬರಮಾಡಿಕೊಂಡು ಗದಗಿಗೆ ಕರೆದೊಯ್ದರು.
ಈ ಸಂದರ್ಭದಲ್ಲಿ ಗಂಗಾವತಿ ನಗರದ ಹಿರಿಯ ಶಿಷ್ಯರಾದ ಶ್ರೀ ಕೆ.ಎಫ್. ಮುದ್ದಾಬಳ್ಳಿ, ಶ್ರೀ ವೆಂಕಟೇಶ್ ದಾಸನಾಳ್, ಶ್ರೀ ಮಲ್ಲಿಕಾರ್ಜುನ ಗೌಡ ಉಡಮಕಲ್ ಸೇರಿದಂತೆ ನೂರಾರು ಶಿಷ್ಯರು, ಭಕ್ತಾದಿಗಳು ಶ್ರೀ ಕಲ್ಲಯ್ಯ ಅಜ್ಜನವರನ್ನು ಹೃದಯಪೂರ್ವಕವಾಗಿ ಗದಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಬೀಳ್ಕೊಟ್ಟರು.
ಗದುಗಿನ ಪುಣ್ಯಾಶ್ರಮದಲ್ಲಿ ಶ್ರೀಗಳು ಮರಳಿದ ಹಿನ್ನೆಲೆಯಲ್ಲಿ ಭಕ್ತರಲ್ಲಿ ಹರ್ಷ ವ್ಯಕ್ತವಾಗಿದೆ.
ವರದಿ: ಗಂಗಾವತಿ

