ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಮಹಾಸ್ವಾಮಿಗಳ 33ನೇ ವರ್ಧಂತಿ ಮಹೋತ್ಸವ….

ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಮಹಾಸ್ವಾಮಿಗಳ 33ನೇ ವರ್ಧಂತಿ ಮಹೋತ್ಸವ…

“ವಿದ್ಯಾ ವಿನಯ ಸಂಪನ್ನಂ ವೀತರಾಗಂ ವಿವೇಕಿನಮ್ ವಂದೇ ವೇದಾಂತ ತತ್ವಜ್ಞಂ ವಿಧುಶೇಖರ ಭಾರತೀಂ”*ಆತ್ಮೀಯ ಬಂಧುಗಳೇ* ಶ್ರೀಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ 33 ನೇಯ ವರ್ಧಂತಿಯ ಶುಭ ಹಾರೈಕೆಗಳು.ಜಗದ್ಗುರು ಶ್ರೀಸನ್ನಿಧಾನಂಗಳು ಎಲ್ಲರಿಗೂ ಅನುಗ್ರಹಿಸಲಿ ಎಂದು ಭಕ್ತಿಪೂರ್ವಕ ಪ್ರಾರ್ಥನೆ. ಜಗದ್ಗುರುಗಳ ಜನನ ತಿರುಪತಿಯಲ್ಲಿ ನಿಷ್ಠಾವಂತ ವೇದ ವಿದ್ವಾಂಸರ ಮನೆಯಲ್ಲಿ 1993ರ ಜುಲೈ 24 ರಂದು ಆಯಿತು. ಅವರ ತಂದೆ ಕುಪ್ಪಾ ವೇ ಬ್ರ.ಶ್ರೀ.ಶಿವಸುಬ್ರಹ್ಮಣ್ಯ ಅವದಾನಿ ಮತ್ತು ತಾಯಿ ಶ್ರೀಮತಿ ಸೀತಾ ನಾಗಲಕ್ಷ್ಮಿ.ಈ ದಂಪತಿಗಳ ಕಿರಿಯ ಪುತ್ರರೇ ತಿರುಪತಿಯಲ್ಲಿ ವೆಂಕಟೇಶ್ವರನ ಕೃಪೆಯಿಂದ ಜನಿಸಿ ವೆಂಕಟೇಶ ಪ್ರಸಾದರೆನಿಸಿದರು. ಐದನೇ ವಯಸ್ಸಿನಲ್ಲೇ ಅವರಿಗೆ ಬ್ರಹ್ಮೋಪದೇಶ ಆಯಿತು.ತಾತ ರಾಮಗೋಪಾಲ ಯಾಜಿಯವರಲ್ಲಿ ಬಾಲಕ ಕೃಷ್ಣ ಯಜುರ್ವೇದ ಕ್ರಮಾಂಕ ಪಾಠ ಕಲಿಯಲು ಆರಂಭಿಸಿದ್ದು ಉಪನಯನದ ನಂತರ.2006 ರಲ್ಲಿ ತಂದೆಯವರೊಂದಿಗೆ ಬಾಲಕ ಶೃಂಗೇರಿಗೆ ಮೊದಲ ಬಾರಿ ಆಗಮಿಸಿದಾಗ ಈ ಕ್ಷೇತ್ರ ಬಾಲಕನನ್ನು ಸೆಳೆದಿರಲೇ ಬೇಕು.ಪುನ: 2008 ರಲ್ಲಿ ತಂದೆಯವರೊಂದಿಗೆ ಬಂದರು.ಆಗಲೇ ತಮಗೆ ಶೃಂಗೇರಿಯೇ ಕರ್ಮಭೂಮಿ ಎಂದವರ ಮನಸ್ಸು ಗಟ್ಟಿ ಮಾಡಿತ್ತು. 2009 ರಲ್ಲಿ ಮತ್ತೆ ಶೃಂಗೇರಿಗೆ ಬಂದಾಗ ಜಗದ್ಗುರುಗಳಿಂದ ತಾನು ಶಾಸ್ತ್ರ ಕಲಿಯಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದರು.ತಂದೆಯವರ ಅನುಮತಿ ನಂತರ ಜಗದ್ಗುರುಗಳ ಅನುಮತಿಯೂ ದೊರಕಿತು. ಕೇವಲ ಒಂದೂವರೆ ವರ್ಷದಲ್ಲಿ ಸಂಸ್ಕೃತ ಕಲಿತಿದ್ದು ಮಾತ್ರವಲ್ಲ ಕನ್ನಡದಲ್ಲಿ ಉಪನ್ಯಾಸ ನೀಡುವಷ್ಟು ಅವರು ಸಮರ್ಥರಾಗಿದ್ದರು. ಉಳಿದವರಿಗೆ ಒಂದೇ ಭಾಷೆ ಕಲಿಯಲು ಕನಿಷ್ಠ ನಾಲ್ಕು ವರ್ಷದ ಕಲಿಕೆ ಅಗತ್ಯವಾದರೆ ಇವರಿಗೆ ಇಷ್ಟು ಸ್ವಲ್ಪ ಸಮಯದಲ್ಲೇ ಎರಡು ಭಾಷೆಯ ಹಿಡಿತ ಸಿದ್ಧಿಸಿತ್ತು. ಸಂಸ್ಕೃತ ಕಾವ್ಯ ಮತ್ತು ಸಾಹಿತ್ಯವನ್ನು ಶೃಂಗೇರಿಯ ವಿದ್ವಾನ್ ಶಿವಕುಮಾರ ಶರ್ಮ ಬೋಧಿಸಿದರೆ ವಿದ್ವಾನ್ ಕೃಷ್ಣ ರಾಜ ಭಟ್ಟರು ವ್ಯಾಕರಣ ಬೋಧಿಸಿದರು. ಎಲ್ಲವೂ ಬಹುಬೇಗ ಕಲಿತ ಬ್ರಹ್ಮಚಾರಿ ಅಚ್ಚರಿಗೆ ಕಾರಣರಾದರು. ಸೂಕ್ಷ್ಮ ಗ್ರಾಹಿ ಬ್ರಹ್ಮಚಾರಿಯಯ ಗುಣ ಸ್ವಭಾವ,ಜ್ಞಾನ ದಾಹ ಅರಿತ ಜಗದ್ಗುರುಗಳು ತಾವೇ ಶಾಸ್ತ್ರ ಕಲಿಸಲು ನಿರ್ಧರಿಸಿದರು. ಎರಡು ವರ್ಷ ಜಗದ್ಗುರುಗಳಿಂದ ಶಿಕ್ಷಣ ದೊರಕಿತು. ನ್ಯಾಯ ಶಾಸ್ತ್ರ, ಮೀಮಾಂಸ ಮತ್ತು ವೇದಾಂತ ಕಲಿಕೆ ಸಾಗುತ್ತಿದ್ದಾಗಲೇ ಅವರ 22 ನೇ ವಯಸ್ಸಿನಲ್ಲೇ ಜನವರಿ 23.2015 ರಂದು ಜಗದ್ಗುರುಗಳು ಅವರಿಗೆ ಸನ್ಯಾಸವಿತ್ತು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿ ಶ್ರೀವಿಧುಶೇಖರ ಭಾರತಿ ಎಂಬ ಯೋಗಪಟ್ಟನೀಡಿದರು.ಆಗ ಜಗದ್ಗುರುಗಳು ತಮಗೆ ಅತ್ಯಂತ ಪೂಜನೀಯರಾದ ತಮ್ಮ ಪರಮಗುರು ಸ್ಮರಣೆಯಲ್ಲಿ ತಾವು ಶ್ರೀ ವಿಧುಶೇಖರ ಎಂಬ ಯೋಗಪಟ್ಟ ನೀಡುತ್ತಿದ್ದು ವಿಧು ಎಂದರೆ ಚಂದ್ರನೆಂದೇ ಅರ್ಥ ಎಂದು ವಿವರ ನೀಡಿದ್ದರು. .ಮುಂದೆ ಎರಡು ವರ್ಷಗಳ ಕಾಲ ಅವರು ತಮ್ಮ ಗುರುವರ್ಯರಿಂದ ಸಂಪೂರ್ಣ ವೇದಾಂತ ಶಾಸ್ತ್ರ ಹೃದ್ಗತ ಮಾಡಿಕೊಂಡರು. ತಮಿಳು ಶಿಕ್ಷಣವನ್ನೇನೂ ಅವರು ಪಡೆದವರಲ್ಲ. 2017 ರಲ್ಲಿ ತಮ್ಮ ಗುರುವರ್ಯರೊಂದಿಗೆ ಧರ್ಮ ವಿಜಯ ಯಾತ್ರೆ ಕೈಗೊಂಡಾಗ ಅವರ ತಮಿಳುನಾಡಿನಲ್ಲಿ ತಮಿಳಿನಲ್ಲೇ ಅನುಗ್ರಹ ಭಾಷಣ ಮಾಡಿದರು. ಮುಂದೆ ಅವರು ತಮಿಳುನಾಡಿನ ವಿಜಯ ಯಾತ್ರೆಯ ಸಂಧರ್ಭದಲ್ಲೆಲ್ಲಾ ತಾವು ತಮಿಳು ಮಾತೃಭಾಷೆಯವರೇ ಎಂಬ ರೀತಿ ಉಪನ್ಯಾಸ ನೀಡಿದರು. ತಮ್ಮ 25 ನೇ ವಯಸ್ಸಿನಲ್ಲೇ ಜಗದ್ಗುರುಗಳ ಅನುಜ್ಞೆಯಂತೆ ಅವರು ಐದು ತಿಂಗಳ ಧರ್ಮ ವಿಜಯ ಯಾತ್ರೆಯನ್ನು ಕರ್ನಾಟಕ, ಆಂದ್ರ ಗಳಲ್ಲಿ ಕೈಗೊಂಡರು. ನಂತರ 4 ತಿಂಗಳ ಮಹಾರಾಷ್ಟ್ರ ವಿಜಯ ಯಾತ್ರೆಯನ್ನು ಮಾಡಿದರು. 2020 ರಲ್ಲಿ ಕೇರಳದಲ್ಲಿ ವಿಜಯ ಯಾತ್ರೆಯನ್ನು ಕೈಗೊಂಡರು ಮತ್ತು ಮಲೆಯಾಳಿಯಲ್ಲೇ ಅನುಗ್ರಹ ಭಾಷಣ ಮಾಡಿದರು.2022 ರಲ್ಲಿ ತಮ್ಮ ಗುರುವರ್ಯರ ಅನುಜ್ಞೆಯಂತೆ ದ್ವಾರಕೆಗೆ ತೆರಳಿ ದ್ವಾರಕಾ ಮತ್ತು ಬದರೀ ಶಂಕರಾಚಾರ್ಯರ ಪಟ್ಟಾಭಿಷೇಕ ನಡೆಸಿ ಅನುಗ್ರಹಿಸಿದರು. ಆಗ ಅವರು ಹಿಂದಿ ಭಾಷೆಯ ಉಪನ್ಯಾಸ ಗಮನ ಸೆಳೆಯಿತು. ಅವನಿ ಶೃಂಗೇರಿ ಮಠ,ನೆಲಮಾವು ಮಠಗಳ ಮಠಾದಿಪತಿಗಳಿಗೆ ಅವರು ಪಟ್ಟಾಭಿಷೇಕ ಮಾಡಿದರು.ಕಾಶ್ಮೀರದ ಟ್ವೀಟ್ವಾಲ್ ಗೆ ತಮ್ಮ ಗುರುವರ್ಯರ ಆದೇಶದಂತೆ ತೆರಳಿ ಶಾರದಾಂಬೆಯ ಪ್ರಾಣ ಪ್ರತಿಷ್ಠೆ ಮಾಡಿ ಅಭಿನವ ಶಂಕರಾಚಾರ್ಯರೆನಿಸೆದರು. ಅವರು ಗುರುವರ್ಯರ ಆದೇಶದಂತೆ ಧರ್ಮ ಪ್ರಬೋಧನೆಗಾಗಿ ನಿರಂತರ ಧರ್ಮ ವಿಜಯ ಯಾತ್ರೆಯನ್ನು ಕೈಗೊಳ್ಳುವ ಮೂಲಕ ಪರಿವ್ರಾಜಕಾಚಾರ್ಯರೆನಿಸಿದ್ದಾರೆ. ಅವರು ದೇವಸ್ಥಾನಗಳಲ್ಲಿ ನಡೆಸುವ ಪೂಜೆ,ದೇವಸ್ಥಾನಗಳ ಕುಂಭಾಭಿಷೇಕ ದಲ್ಲಿ ,ಹೋಮ ಹವನಗಳಲ್ಲಿ ಪಾಲ್ಗೊಳ್ಳುವ ರೀತಿ ಭಕ್ತರ ಹೃನ್ಮನ ಸೆಳೆಯುತ್ತದೆ.ಶೃಂಗೇರಿಯ ಅತ್ಯಂತ ಪ್ರಸಿದ್ಧ ವಾಕ್ಯಾರ್ಥ ಸಭೆಗಳಲ್ಲಿ ಅವರು ಅಧ್ಯಕ್ಷತೆ ವಹಿಸಿ ನಿರ್ವಹಿಸುವ ರೀತಿ ದೇಶದ ಪ್ರಖ್ಯಾತ ಪಂಡಿತರನ್ನೇ ನಿಬ್ಬೆರಗಾಗುವಂತೆ ಮಾಡಿದೆ. ಧರ್ಮ ಆಚರಣೆಗೆ ಅವರು ನೀಡುವ ಉಪನ್ಯಾಸಗಳು ಮನಸ್ಸಿಗೆ ನಾಟುತ್ತದೆ. ಸತತ ಅಧ್ಯಯನ ಮತ್ತು ಅಧ್ಯಾಪನ ನಡೆಸುವ ಅವರು ತಮ್ಮ ಅನುಗ್ರಹ ಭಾಷಣಗಳಲ್ಲಿ ಭಗವದ್ಗೀತೆ,ಶಂಕರ ಭಾಷ್ಯ,ವೇದ,ಉಪನಿಷತ್,ಶಂಕರ ವಿಜಯ,ಪುರಾಣಗಳ ಶ್ಲೋಕಗಳನ್ನು ಪೋಣಿಸುವ ರೀತಿ ಅವರ ಅಪಾರ ವಿದ್ವತ್ ಗೆ ಸಾಕ್ಷಿ ಹೇಳುತ್ತದೆ. ಶೃಂಗೇರಿಯ ಗುರುಪರಂಪರೆಯ ಎಲ್ಲಾ ವಿಶೇಷಣಗಳೂ ಅವರಲ್ಲಿ ಮೈತಾಳಿದೆ. ಈ ವರ್ಷದ ಅವರ ಉತ್ತರ ಭಾರತದ ಧರ್ಮ ವಿಜಯ ಯಾತ್ರೆ ಉದ್ದಕ್ಕೂ ಕಂಡ ದೃಶ್ಯ ಭಾರತದ ಧಾರ್ಮಿಕ ಕ್ಷೇತ್ರದಲ್ಲಿ ನವ ನಕ್ಷತ್ರೋದಯವಾಗಿದ್ದಕ್ಕೆ ಸಾಕ್ಷಿ ಒದಗಿಸಿತು. ಪ್ರಯಾಗರಾಜ್ ಮಹಾ ಕುಂಭದಲ್ಲಿ ಅವರು ಮೌನಿ ಅಮವಾಸ್ಯೆಯ ದಿನ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು.ಇದಕ್ಕೂ ಮೊದಲು ಅಲ್ಲಿ ಪ್ರತಿದಿನ ಶಾಸ್ತ್ರ ಸಭೆ ನಡೆಸಿದರು. ಸಂತ ಸಮ್ಮೇಳನದ ಅಧ್ಯಕ್ಷತೆ ವಹಿಸಿದರು. ಮೂರು ಆಮ್ನಾಯ ಪೀಠಾದೀಶ್ವರರು ಪಾಲ್ಗೊಂಡ ಧರ್ಮ ಸಂಸತ್ ಅಧ್ಯಕ್ಷತೆ ವಹಿಸಿದರು. ಕಾಶಿಯಲ್ಲಿ ಮಾತಾ ಅನ್ನಪೂರ್ಣೇಶ್ವರಿಯ ಪ್ರತಿಷ್ಠಾ ಕುಂಭಾಭಿಷೇಕ ನಡೆಸಿದರು. ತಮ್ಮ ಗುರುವರ್ಯರು ಎಲ್ಲೆಲ್ಲಿ ತೆರಳಿ ಅನುಗ್ರಹಿಸಿದ್ದರೋ ಅಲ್ಲೆಲ್ಲಾ ತೆರಳಿ ಅನುಗ್ರಹಿಸಿದರು. ಕಾಶೀ ವಿಶ್ವನಾಥನ ಪೂಜೆ ನೇರವೇರಿಸಿದರು. ಈಗಾಗಲೇ ಅವರು ಸುಬ್ರಹ್ಮಣ್ಯ ಪುಣ್ಯ ಕ್ಷೇತ್ರಗಳಾದ ತಿರಚಂದೂರು ಮತ್ತು ಪಳನಿಗೆ ತೆರಳಿ ಪೂಜೆ ನೆರವೇರಿಸಿದ್ದಾರೆ. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂಬತ್ತು ಕಡೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ದೇಶಾದ್ಯಂತ ನೂರಾರು ದೇವಸ್ಥಾನಗಳ ಕುಂಭಾಭಿಷೇಕ, ಪ್ರತಿಷ್ಠಾ ಕಾರ್ಯಕ್ರಮ ನಡೆಸಿದ್ದಾರೆ.ಎಲ್ಲಕ್ಕೂ ಶಿಖರಪ್ರಾಯವಾಗಿ ಅವರ ಅಚಲ ಗುರುಭಕ್ತಿ ಸಾಟಿ ಇಲ್ಲದ್ದು. ಎಲ್ಲೇ ಶೃಂಗೇರಿಯಿಂದ ದೂರ ತೆರಳಲಿ ತಮ್ಮ ಗುರುವರ್ಯರ ಸ್ಮರಣೆ ಮಾಡದೇ ಅವರು ಅನುಗ್ರಹ ಭಾಷಣ ನೀಡುವುದೇ ಇಲ್ಲ.ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳ ಸನ್ಯಾಸ ಸ್ವೀಕರಿಸಿದ ಸುವರ್ಣ ವರ್ಷಾಚರಣೆಯನ್ನು ಅವರು ಅಭೂತಪೂರ್ವವಾಗಿ ಆಚರಿಸಿದರು.ಸುವರ್ಣ ಭಾರತಿ ಕಾರ್ಯಕ್ರಮ ಒಂದು ನವ ಇತಿಹಾಸ ಸೃಷ್ಟಿಸಿತು. ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ” ನಮ: ಶಿವಾಯ” ಶ್ರೀ ಭಾರತೀತೀರ್ಥ ಮಹಿಸ್ವಾಮಿಗಳ ಸುವರ್ಣ ವರ್ಷದ ಕಾರ್ಯಕ್ರಮದಲ್ಲಿ ಒಂದೂವರೆ ಲಕ್ಷ ಕಂಠಗಳು ಏಕಕಾಲಕ್ಕೆ ಒಂದೆಡೆ ಶಂಕರ ಭಗವತ್ಪಾದರ ಸ್ತೋತ್ರ ಪಠಣ ಮಾಡುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಿತು. ಶೃಂಗೇರಿಯಲ್ಲಿ ಗುರುವರ್ಯರ ಗೌರವಾರ್ತ ನಡೆದ ತ್ರಿವೇಣಿ ಸಂಗಮವೂ ಒಂದು ವಿಶ್ವ ದಾಖಲೆಯೇ. ಶೃಂಗೇರಿಯಂತ ಪುಟ್ಟ ಹಳ್ಳಿಯಲ್ಲಿ ಐವತ್ತು ಸಹಸ್ರ ಭಕ್ತರು ಸ್ತೋತ್ರ ಪಠಣ ಮಾಡಿ ಇತಿಹಾಸ ಸೃಷ್ಟಿಸಿದರು.ದೇಶ ಯುದ್ದ ಸ್ಥಿತಿಯಲ್ಲಿದ್ದಾಗಲೇ ಜಗದ್ಗುರುಗಳು ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿ ಧಾರ್ಮಿಕ ಕಾರ್ಯಕ್ರಮ ನಡೆಸಿದರು.ಆ ಸಂಧರ್ಭ ಅವರು ಪುರ ಪ್ರವೇಶ ಮಾಡುವಾಗ ಸಂಪ್ರದಾಯದಂತೆ ತಮ್ಮ ಶೋಭಾ ಯಾತ್ರೆ ಸಿದ್ಧತೆ ಆಗಿದ್ದರೂ ಅದನ್ನು ನಿರಾಕರಿಸಿದರು. ದೇಶ ಸಂಕಷ್ಟದಲ್ಲಿದೆ ನಮ್ಮ ಶೋಭಾ ಯಾತ್ರೆ ಬೇಡ ಎಂದರು. ದೇಶದ ಒಳಿತಿಗಾಗಿ ಅವಿರತ ಪ್ರಾರ್ಥನೆ ಸಲ್ಲಿಸಲು ಭಕ್ತರಿಗೆ ಉಪದೇಶಿಸಿದರು.ಕಾಶ್ಮೀರದ ಉಗ್ರರ ದಾಳಿಯಲ್ಲಿ ಬಲಿಯಾದ ಎಲ್ಲ ಸಂತ್ರಸ್ತರ ಕುಟುಂಬಗಳಿಗೂ ಶಾರದಾ ಪ್ರಸಾದ ರೂಪವಾಗಿ ತಲಾ ಎರಡು ಲಕ್ಷರೂ ಕಳಿಸಿಕೊಟ್ಟರು.ಅವರ ಅಪ್ರತಿಮ ದೇಶಭಕ್ತಿ ಶ್ರೀ ವಿದ್ಯಾರಣ್ಯರನ್ನು ನೆನಪಿಗೆ ತರುವಂತಿತ್ತು. ಜಗದ್ಗುರು ಶ್ರೀ ವಿಧುಶೇಖರ ಭಾರತಿಯವರನ್ನು ಆಗಲೇ ದೇಶದ ರಾಷ್ಟ್ರಪತಿಗಳು,ಉಪ ರಾಷ್ಟ್ರಪತಿಗಳು,ಅನೇಕ ರಾಜ್ಯದ ರಾಜ್ಯಪಾಲರು,ಗೃಹಸಚಿವರೂ ಸೇರಿದಂತೆ ಕೇಂದ್ರದ ಮಂತ್ರಿಗಳು,ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಒಳಗೊಂಡಂತೆ ಅನೇಕ ಮುಖ್ಯ ಮಂತ್ರಿಗಳು,ಧಾರ್ಮಿಕ ಮುಖಂಡರು,ನ್ಯಾಯ ಮೂರ್ತಿಗಳು,ಎಲ್ಲಾ ಕ್ಷೇತ್ರಗಳ ಮುಖಂಡರು ಭೇಟಿ ಆಗಿ ಅನುಗ್ರಹ ಪಡೆದಿದ್ದಾರೆ. ಸಕಲ ಶಾಸ್ತ್ರ ಪಾರಂಗತರಾಗಿ,ವೇದಾಂತ ಹೃದ್ಗತ ಮಾಡಿಕೊಂಡು ನೈಜ ಸನ್ಯಾಸಿಯಾಗಿ ಸನಾತನ ಧರ್ಮದ ತೋರುಬೆಳಕಾಗಿ ಅವರು ಮೂಡಿ ಬಂದಿದ್ದಾರೆ. ಶೃಂಗೇರಿಯ ಧಕ್ಷಿಣಾಮ್ನಾಯ ಶಾರದಾಪೀಠ ವನ್ನು ಮುನ್ನೆಡೆಸುವ ಸಮರ್ಥ ಪೀಠಾದೀಶ್ವರರಾಗಿ ಮಠದ ಬಹು ಆಯಾಮದ ಧಾರ್ಮಿಕ,ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವರು ಶಕ್ತಿ ತುಂಬುತ್ತಿದ್ದಾರೆ. ತಮ್ಮ ಶಿಷ್ಯರು ತಮಗೆ ಪ್ರತಿಕ್ಷಣ ಆನಂದ ಉಂಟು ಮಾಡುತ್ತಿದ್ದಾರೆ. ನಮ್ಮ ಮನಸ್ಸಿನಲ್ಲಿದ್ದುದನ್ನು ಅವರ ಓದಬಲ್ಲರು.ಶೃಂಗೇರಿಗೆ ಅತ್ಯಂತ ಯೋಗ್ಯ ಉತ್ತರಾಧಿಕಾರಿಯನ್ನು ಜಗನ್ಮಾತೆ ಶಾರದಾಂಬೆ ಅನುಗ್ರಹಿಸಿದ್ದಾಳೆ ಎಂಬ ಜಗದ್ಗುರು ಶ್ರೀ ಭಾರತೀತೀರ್ಥರ ಮಾತು ಅಕ್ಷರಶಃ ಸತ್ಯವಾಗಿದೆ. ಜಗದ್ಗುರು ಶ್ರೀ ವಿಧುಶೇಖರ ಭಾರತಿಯವರು ಸನಾತನ ಧರ್ಮದ ಸಮರ್ಥ ಮಾರ್ಗದರ್ಶಕರಾಗಿ ಸಾಧನಾ ಪಥದಲ್ಲಿ ಮುನ್ನೆಡೆಯುತ್ತಿದ್ದಾರೆ.

ಸಂಗ್ರಹ. ಶ್ರೀ ನಾರಾಯಣರಾವ್ ವೈದ್ಯ. ಧರ್ಮ ದರ್ಶಿಗಳು. ಶಂಕರ್ ಮಠ ಗಂಗಾವತಿ.

Leave a Reply

Your email address will not be published. Required fields are marked *