ತಲ್ವಾರ್ನಿಂದ ಕೇಕ್ ಕತ್ತರಿಸಿ ಸಂಭ್ರಮಿಸಿದ ಯುವಕ: ವಿಡಿಯೋ ವೈರಲ್ ಬೆನ್ನಲ್ಲೇ ಸಂಕಷ್ಟ...

ಕೊಪ್ಪಳ: ಹುಟ್ಟುಹಬ್ಬದ ಸಂಭ್ರಮದಲ್ಲಿ ಕಾನೂನು ಬಾಹಿರವಾಗಿ ತಲ್ವಾರ್ ಬಳಸಿ ಕೇಕ್ ಕತ್ತರಿಸಿದ ಯುವಕನೊಬ್ಬ ಈಗ ಪೊಲೀಸರ ಅತಿಥಿಯಾಗುವ ಭೀತಿಯಲ್ಲಿದ್ದಾನೆ. ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಬುನ್ನಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಘಟನೆಯ ವಿವರ:ಬುನ್ನಟ್ಟಿ ಗ್ರಾಮದ ಯಮನೂರಪ್ಪ ಎಂಬ ಯುವಕ ತನ್ನ ಹುಟ್ಟುಹಬ್ಬದ ಪ್ರಯುಕ್ತ ಸ್ನೇಹಿತರ ಸಮ್ಮುಖದಲ್ಲಿ ತಲ್ವಾರ್ (ಬಾಕು) ಹಿಡಿದು ಕೇಕ್ ಕತ್ತರಿಸಿದ್ದಾನೆ. ಈ ದೃಶ್ಯಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಮಾರಕಾಸ್ತ್ರಗಳ ಪ್ರದರ್ಶನದ ಬಗ್ಗೆ ಆತಂಕ ವ್ಯಕ್ತವಾಗಿದೆ.ಪೊಲೀಸ್ ದೂರು ದಾಖಲು:ಸಾರ್ವಜನಿಕವಾಗಿ ಮಾರಕಾಸ್ತ್ರ ಪ್ರದರ್ಶಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಯಮನೂರಪ್ಪ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದು, ಕಾನೂನು ಕ್ರಮ ಕೈಗೊಳ್ಳುವ ಸಿದ್ಧತೆಯಲ್ಲಿದ್ದಾರೆ.ಯುವಕನ ಸ್ಪಷ್ಟನೆ:ಈ ಘಟನೆ ಕುರಿತು ವಿಡಿಯೋ ಹೇಳಿಕೆ ನೀಡಿರುವ ಯಮನೂರಪ್ಪ, “ಇದು ಇತ್ತೀಚಿನ ವಿಡಿಯೋ ಅಲ್ಲ, ಸುಮಾರು ಎರಡು ವರ್ಷಗಳ ಹಿಂದಿನದ್ದು. ನನ್ನ ಅಭಿಮಾನಿಗಳು ಇದನ್ನು ಈಗ ಸ್ಟೇಟಸ್ ಹಾಕಿಕೊಂಡಿದ್ದರಿಂದ ವೈರಲ್ ಆಗಿದೆ. ನಮ್ಮ ವಂಶಸ್ಥರು ಈ ತಲ್ವಾರನ್ನು ದೇವರ ಮನೆಯಲ್ಲಿ ಇಟ್ಟು ಪೂಜಿಸುತ್ತಾರೆ. ನಾವು ಸಮಾಜಕ್ಕೆ ಕೆಟ್ಟ ಸಂದೇಶ ನೀಡುವ ಉದ್ದೇಶದಿಂದ ಹೀಗೆ ಮಾಡಿಲ್ಲ. ತಿಳಿಯದೇ ಮಾಡಿದ ತಪ್ಪಿಗೆ ಕ್ಷಮೆ ಇರಲಿ” ಎಂದು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾನೆ.ಕಾನೂನುಬಾಹಿರವಾಗಿ ಮಾರಕಾಸ್ತ್ರಗಳ ಪ್ರದರ್ಶನ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಯುವಕರು ಇಂತಹ ಸಂಭ್ರಮಾಚರಣೆಗಳಿಂದ ದೂರವಿರಬೇಕೆಂದು ಪೊಲೀಸರು ಎಚ್ಚರಿಸಿದ್ದಾರೆ.
