ಸರ್ಕಾರಿ ನೌಕರರ ವಾರ್ಷಿಕ ಮಹಾಸಭೆ : ಯಶಸ್ವಿ…

ಗಂಗಾವತಿ : ತಾಲೂಕಿನ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ಜರುಗಿತು. ಈ ಸಭೆಯಲ್ಲಿ ಗಂಗಾವತಿ ತಾಲೂಕ ಸರ್ಕಾರಿ ನೌಕರರ ತಾಲೂಕ ಸಂಘದ ಅಧ್ಯಕ್ಷರಾದ ಶಿವಶಂಕರ ಕಲ್ಮಠರವರು ಪ್ರಾಸ್ತಾವಿಕವಾಗಿ ಮಾತನಾಡಿ, “ಸರ್ಕಾರಿ ನೌಕರರ ಸಂಘದ ವತಿಯಿಂದ ಅನೇಕ ನೌಕರರ ಸ್ನೇಹಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದು ಸಂತೋಷದ ವಿಷಯ. ರಾಜ್ಯ ಅಧ್ಯಕ್ಷರಾದ ಮಾನ್ಯ ಸಿ ಎಸ್ ಷಡಕ್ಷರಿ ಅವರ ಅವಧಿಯಲ್ಲಿ 25ಕ್ಕೂ ಹೆಚ್ಚು ಮಹತ್ವದ ಆದೇಶಗಳನ್ನು ಸರ್ಕಾರಿ ನೌಕರರಿಗೆ ಜಾರಿಗೆ ತಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಹಾಗೆಯೇ ನಮ್ಮ ತಾಲೂಕಿನಲ್ಲಿ 66 ಕ್ರೀಡಾಪಟುಗಳು ಜಿಲ್ಲಾ ಮುಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಭಾಗವಹಿಸಿ ಗಂಗಾವತಿ ತಾಲೂಕಿಗೆ ಕೀರ್ತಿಯನ್ನು ತಂದಿದ್ದಾರೆ. ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳಿಗೆ ಸಂಘದ ವತಿಯಿಂದ ಪ್ರಯಾಣ ಭತ್ಯೆಯನ್ನು ನೀಡಿರುವುದು ರಾಜ್ಯದಲ್ಲಿಯೇ ಪ್ರಥಮ ಸಂಘವಾಗಿದೆ ಎನ್ನಬಹುದು. ಅಲ್ಲದೆ ಸರ್ಕಾರಿ ನೌಕರರಿಗೆ ಅನೇಕ ಸೌಲಭ್ಯಗಳನ್ನು ಒದಗಿಸಿದ್ದೇವೆ. ಟ್ಯಾಕ್ಸ್ ಫಾರ್ಮ್ ನಂಬರ್ 16, ಮೃತರ ಕುಟುಂಬಕ್ಕೆ 5000 ರೂಪಾಯಿಗಳ ಸಹಾಯ ಧನ, ನಿವೃತ್ತ ನೌಕರರಿಗೆ ಸನ್ಮಾನ ಮುಂತಾದ ಯೋಜನೆಗಳನ್ನು ಕೈಗೊಂಡಿದ್ದೇವೆ. ಸರ್ಕಾರಿ ನೌಕರರ ಸಂಘದ ತೆರಿಗೆ ಕಟ್ಟುವಲ್ಲಿ ಮಾನ್ಯ ಆಯುಕ್ತರ ಸಹಾಯ, ಸಹಕಾರವನ್ನು ನೆನಪಿಸಿಕೊಂಡು ಧನ್ಯವಾದಗಳು ಅರ್ಪಿಸಿದರು.
ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಉಪಾಧ್ಯಕ್ಷರು ಹಾಗೂ ಕೊಪ್ಪಳ ಜಿಲ್ಲಾ ಸರ್ಕಾರಿ ನೌಕರರ ಜಿಲ್ಲಾ ಅಧ್ಯಕ್ಷರಾದ ನಾಗರಾಜ ಜುಮ್ಮಣ್ಣನವರ್ ಮಾತನಾಡಿ, ” ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ 103 ವರ್ಷಗಳ ಇತಿಹಾಸವಿದೆ. ಸಂಘವು ನೌಕರರ ಬೇಡಿಕೆಗಳ ಪರವಾಗಿ ಹೋರಾಟಗಳನ್ನು ಮಾಡುತ್ತಾ ಬಂದಿದ್ದು, ಗಂಗಾವತಿಯ ಮಹಿಳಾ ಶಿಕ್ಷಕಿಯರ ಕರೆಯ ಮೇರೆಗೆ ಮಾನ್ಯ ರಾಜ್ಯಾಧ್ಯಕ್ಷರನ್ನು ಸಂಪರ್ಕಿಸಿ, ಕ್ಯಾನ್ಸರ್ ಪೀಡಿತ ಹಾಗೂ ಕಿಡ್ನಿ ಡಯಾಲಿಸಿ ಪೀಡಿತ ನೌಕರರಿಗೆ ವೇತನ ಸಹಿತ ರಜೆ ಮಂಜೂರು ಮಾಡಿರುವುದನ್ನು ತಿಳಿಸಲು ಹೆಮ್ಮೆಯಾಗುತಿದೆ ಎಂದರು. ಮುಂದುವರಿದು ಮಾತನಾಡಿದ ಅವರು, “ನೌಕರರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಕ್ರಿಯಾಶೀಲ ಮಾನ್ಯ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಕ್ಷರಿಯವರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಕೇಂದ್ರ ಮಾದರಿ ವೇತನ ಹಾಗೂ nps ನಿಂದ OPS ಜಾರಿಗೆಗೊಳಿಸುವಲ್ಲಿ ಶ್ರಮಿಸುತ್ತಿರುವುದಾಗಿ ಆಶಾಭಾವನೆಯೊಂದಿಗೆ ನಾವೆಲ್ಲರೂ ಇದ್ದೆವೆ ಎಂದು ಮಾಹಿತಿಯನ್ನು ಹಂಚಿಕೊಂಡರು. ಸರ್ಕಾರಿ ನೌಕರರ ಸಂಘಟನೆ ಕಟ್ಟುವಲ್ಲಿ ಶ್ರಮಿಸಿದ ಎಲ್ಲಾ ನೌಕರರನ್ನು ಹಾಗೂ ಮಹಿಳಾ ನೌಕರರ ಪಾತ್ರದ ಬಗ್ಗೆ ಸ್ಮರಿಸಿದರು.

ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಉಪಸ್ಥಿತರಿದ್ದ, ಗಂಗಾವತಿ ನಗರಸಭೆಯ ಪೌರಾಯುಕ್ತರವರು ಮಾತನಾಡಿ, “ತಮ್ಮ ಇಪ್ಪತ್ತು ವರ್ಷದ ಸೇವೆಯಲ್ಲಿ ಸರ್ಕಾರಿ ನೌಕರರ ಸಂಘಟನೆಯ ಕಾರ್ಯದ ಬಗ್ಗೆ ಸ್ಮರಿಸಿದರು. ಸರ್ಕಾರಿ ನೌಕರರು ಸದಾ ಕಾಲವು ಒತ್ತಡದಲ್ಲಿಯೇ ಸೇವೆಯನ್ನು ಸಲ್ಲಿಸುತಿದ್ದೇವೆ ಹಾಗಾಗಿ ಪ್ರತಿಯೊಬ್ಬರೂ ಧೈರ್ಯದಿಂದ ಸಾರ್ವಜನಿಕರ ಕೆಲಸವನ್ನು ನಿರ್ವಹಿಸಲು ಧೈರ್ಯಬೇಕು ಎಂದು ಹೇಳಿದರು. ವೃಂದ ಸಂಘಗಳಿಗೆ ಸರ್ಕಾರಿ ನೌಕರರ ಸಂಘವು ಕಳಸ ವಿದ್ದಂತೆ. ಇದು ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ಮುಟ್ಟುವಂತೆ ಕೆಲಸ ನಿರ್ವಹಿಸುತ್ತದೆ ಎಂದು ತಿಳಿಸಿದರು.
ಇನ್ನೋರ್ವ ಅತಿಥಿಗಳಾದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡಿ, “ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವುಗಳನ್ನು ನಿವಾರಿಸಲು ಸರ್ಕಾರಿ ನೌಕರರ ಸಂಘವು ಅನೇಕ ಪರಿಹಾರೋಪಾಯದ ಮಾರ್ಗಗಳನ್ನು ಕಂಡುಕೊಳ್ಳಬೇಕೆಂದು ಸಲಹೆ ನೀಡಿದರು. ನಂತರ ಮಾತನಾಡಿದ ಶ್ರೀಯುತ ಯಮನಪ್ಪ ನವರು ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿಗಳು ಹಾಗೂ ಕಾರಟಗಿ ತಾಲೂಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಹನುಮಂತಪ್ಪ ನಾಯಕರವರು ಸಂಘದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಈಶ್ವರ ಸವಡಿ ಜಿಲ್ಲಾಧ್ಯಕ್ಷರು ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಕೊಪ್ಪಳ. ಶ್ರೀ ಹನುಮಂತಪ್ಪ ಆನೆಗೊಂದಿ ಅಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಗಂಗಾವತಿ, ಬಸವರಾಜ ಸ್ವಾಮಿ ಅಧ್ಯಕ್ಷರು ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘ ಗಂಗಾವತಿ, ಎಲ್ಲಾ ಇಲಾಖೆಯ ತಾಲೂಕ ಮುಖ್ಯಸ್ಥರು ಹಾಗೂ ವಿವಿಧ ವೃಂದದ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ನೌಕರರು ಹಾಜರಾಗಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಶರಣಪ್ಪ ಹಕ್ಕಂಡಿಯವರು ಸ್ವಾಗತಿಸಿದರೆ, ಗಂಗಾವತಿ ತಾಲೂಕ ಸರ್ಕಾರಿ ನೌಕರ ಸಂಘದ ವರದಿ ವಾಚನವನ್ನು ಶ್ರೀಯುತ ಉಮೇಶ ರವರು ವಾಚನ ಮಾಡಿದರು. ವಾರ್ಷಿಕ ಲೆಕ್ಕಪತ್ರ ವರದಿಯನ್ನು ಶ್ರೀನಿವಾಸ್ ವೆಂಕಟ ರಾವ್ ಅವರು ಮಂಡಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ಜಯಶ್ರೀ ಹಕ್ಕಂಡಿಯವರು ನಿರೂಪಿಸಿದರು. ಇದೇ ಸಂದರ್ಭದಲ್ಲಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ನಿರ್ದೇಶಕರುಗಳು ಹಾಜರಿದ್ದರು
