ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟು ಡೆಂಗ್ಯೂ ಹರಡುವಿಕೆ ತಡೆಗಟ್ಟಿ..ಆಶಾ ಬೇಗಂ ಕರೆ

ಗಂಗಾವತಿ.16ಡೆಂಗ್ಯೂ ಜ್ವರ ಸೊಳ್ಳೆಗಳ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಮುಂಗಾರು ಮಳೆ ಪ್ರಾರಂಭವಾಗಿದ್ದು, ಹಳ್ಳ ಕೊಳ್ಳಗಳಲ್ಲಿ ನೀರು ನಿಲ್ಲುತ್ತದೆ. ಹೆಚ್ಚಾಗಿ ಸೊಳ್ಳೆಗಳು ನಿಂತ ನೀರಿನಲ್ಲಿ ಉತ್ಪತ್ತಿಯಾಗುತ್ತವೆ. ಹೀಗಾಗಿ ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆಶಾ ಬೇಗಂ ಹೇಳಿದರು.ಅವರು ಇಂದು ಗಂಗಾವತಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ 2 ಇಸ್ಲಾಂಪೂರುದಲ್ಲಿ ಡೆಂಗ್ಯೂ ಜಾಗೃತಿ ಜಾಥಾ ಮತ್ತು ಮಾನವ ಸರಪಳಿ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮೇ 16 ರಂದು ಆರೋಗ್ಯ ಇಲಾಖೆಯಿಂದ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಯನ್ನು ಆಚರಣೆ ಮಾಡಲಾಗುತ್ತದೆ. ಡೆಂಗ್ಯೂ ನಿಯಂತ್ರಣದ ಜಾಗೃತಿ ಜಾಥಾ ಕಾರ್ಯಕ್ರಮ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತಹ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಸಾರ್ವಜನಿಕರು ಡೆಂಗ್ಯೂ ಜ್ವರದ ಲಕ್ಷಣಗಳು ಕಂಡು ಬಂದರೆ ತಕ್ಷಣ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಮುನ್ನಚ್ಚರಿಕಾ ಕ್ರಮಗಳನ್ನು ಅನುಸರಿಸಿ ರೋಗ ಹರಡದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ರೋಗ ಬರುವುದಕ್ಕೂ ಮುಂಚಿತವಾಗಿ ನಾವುಗಳು ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚ ವಾಗಿಟ್ಟುಕೊಂಡರೆ ರೋಗ ಹರಡುವುದಿಲ್ಲ, ಹೀಗಾಗಿ ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳಿ ಎಂದರು.ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರಾದ ಡಾ.ವಿನೋದಕುಮಾರ ಮಾತನಾಡಿ, ರಾಷ್ಟ್ರೀಯ ಡೆಂಗ್ಯೂ ದಿನಾಚರಣೆಯನ್ನು ಈ ಬಾರಿ ಸಮುದಾಯದೊಂದಿಗೆ ಸೇರಿ ಡೆಂಗ್ಯೂ ನಿಯಂತ್ರಿಸೋಣ ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಡೆಂಗ್ಯೂ ಜ್ವರವು ಸೊಳ್ಳೆಯಿಂದ ಹರಡುವಂತಹದ್ದು ಒಬ್ಬರಿಂದ ಮತ್ತೊಬ್ಬರಿಗೆ ಬರುವಂತಹ ಖಾಯಿಲೆ ಇದು ಆದ್ದರಿಂದ ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಸುತ್ತ-ಮುತ್ತ ಸ್ವಚ್ಛತಾ ಕಾಪಾಡಿಕೊಳ್ಳಬೇಕು ಎಂದರು.ತೀವ್ರ ಜ್ವರ, ಕಣ್ಣು ಹಿಂಭಾಗ ನೋವು, ತೀರ ಮೈ-ಕೈ ನೋವು ಡೆಂಗ್ಯೂ ರೋಗದ ಲಕ್ಷಣಗಳು. ಈ ರೋಗ ಬರದಂತೆ ತಡೆದುಕೊಳ್ಳುವುದೇ ಮೂಲ ಉದ್ದೇಶವಾಗಿರುತ್ತದೆ, ಸೊಳ್ಳೆಗಳು ಉತ್ಪತ್ತಿ ಆಗದಂತೆ ನೋಡಿಕೊಳ್ಳುವುದು, ಮನೆ ಆವರಣದಲ್ಲಿ ನೀರು ನಿಲ್ಲದಂತೆ ಸ್ವಚ್ಛತಾ ಕಾಪಾಡಿಕೊಳ್ಳಬೇಕು ಹಾಗೂ ಈ ರೋಗದ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದು ಹೇಳಿದರು.ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಹನುಮೇಶ ನಾಯಕ, ಸಂತೋಷ, ಮಲೇರಿಯಾ ಲಿಂಕ್ ವರ್ಕರ ರಮೇಶ ಸಾಲ್ಮನಿ,ಹೆಚ್.ಸುರೇಶ,ಹಾಗೂ ಆರೋಗ್ಯ ಸಿಬ್ಬಂದಿಗಳು ಆಶಾ ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು.
