ಕಂಪ್ಲಿ ಪಟ್ಟಣದಲ್ಲಿ ಚರಂಡಿ ನೀರು ಕಾಲುವೆಗೆ : ಕ್ರಮಕೈಗೊಳ್ಳದ ಪುರಸಭೆ ಅಧಿಕಾರಿಗಳು…

ಬಳ್ಳಾರಿ / ಕಂಪ್ಲಿ : ಕಂಪ್ಲಿ ಪಟ್ಟಣದಲ್ಲಿ ಸುಪ್ರಿಂ ಕೋರ್ಟನ ಆದೇಶಕ್ಕಾಗಲಿ, ರಾಜ್ಯ ಹೈಕೋರ್ಟನ ಆದೇಶಗಳಿಗಾಗಲಿ ಕಿಂಚಿತ್ತು ಕಿಮ್ಮತ್ತಿಲ್ಲವೆನ್ನುವುದು ಸಾಕ್ಷಿ ಸಮೇತ ರುಜುವಾತಾಗುತ್ತಿದೆ. ಯಾಕೆಂದರೆ ರಾಜ್ಯ, ರಾಷ್ಟ್ರದ ನ್ಯಾಯಾಲಯಗಳು ಕಾಲುವೆ, ಕೆರೆ, ನದಿಗಳಿಗೆ ಚರಂಡಿ ನೀರನ್ನು ಬಿಡಬಾರದೆನ್ನುವ ಆದೇಶಗಳಿದ್ದರೂ ಸಹಿತ ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿ ಮಾತ್ರ ಪಟ್ಟಣದ ಬಹುತೇಕ ಚರಂಡಿಗಳ ನೀರು ಪಕ್ಕದಲ್ಲಿಯೇ ಇರುವ ವಿಜಯನಗರ ಕಾಲುವೆ, ತುಂಗಭದ್ರಾ ನದಿಗೆ ಪ್ರತಿದಿನಿ ಸೇರುತ್ತಿದೆಯಾದರೂ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾದ ಪುರಸಭೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 40 ರಿಂದ 45 ಸಾವಿರ ಜನಸಂಖ್ಯೆ ಇದ್ದು, ಪಟ್ಟಣದ ಸುತ್ತ ವಿಜಯನಗರ ಕಾಲುವೆ, ಉಪ ಕಾಲುವೆಗಳು ಇದ್ದು, ಪಟ್ಟಣದ ಬಹುತೇಕ ಚರಂಡಿಗಳ ನೀರು ಈ ಕಾಲುವೆಗಳನ್ನು ಸೇರುತ್ತಿದೆ. ಮತ್ತು ಪುರಸಭೆ ವ್ಯಾಪ್ತಿಯ ಕೋಟೆ ಪ್ರದೇಶದ ಚರಂಡಿಗಳ ನೀರು ಪಕ್ಕದಲ್ಲಿಯೇ ಇರುವ ತುಂಗಭದ್ರಾ ನದಿಗೆ ಸೇರುತ್ತಿದೆ. ಇದರಿಂದಾಗಿ ಕಾಲುವೆ ಹಾಗೂ ನದಿ ಚರಂಡಿ ನೀರಿನಿಂದ ಕಲುಷಿತಕೊಳ್ಳುತ್ತಿದ್ದು, ಅದೇ ನೀರನ್ನು ಸಾರ್ವಜನಿಕರು ಉಪಯೋಗಿಸುತ್ತಿದ್ದಾರೆ, ಜಾನುವಾರುಗಳ ಸಹಿತ ಇದೇ ನೀರನ್ನು ಕುಡಿಯುತ್ತಿವೆ. ಜೊತೆಗೆ ನದಿ ಪಾತ್ರದ ಕೆಳಭಾಗದಲ್ಲಿನ ಗ್ರಾಮಗಳ ಜನರು ಸಹಿತ ಚರಂಡಿ ನೀರು ಮಿಶ್ರಿತ ನೀರನ್ನು ಕುಡಿಯಲು ಹಾಗೂ ಬಳಸಲು ಬಳಸುತ್ತಿದ್ದಾರೆ. ಇದರಿಂದಾಗಿ ರೋಗ ರುಜಿನಗಳು ಅಧಿಕವಾಗುತ್ತಿವೆ. ಇತ್ತೀಚೆಗೆ ಕಂಪ್ಲಿ ಪಟ್ಟಣದಲ್ಲಿ ನಡೆದ ನಿರ್ಮಲ ತುಂಗಭದ್ರಾ ಅಭಿಯಾನದ ಸಂದರ್ಭದಲ್ಲಿ ಅನೇಕ ಪ್ರಗತಿಪರ ಸಂಘಟನೆಗಳು ಚರಂಡಿ ನೀರನ್ನು ನದಿ ಹಾಗೂ ಕಾಲುವೆಗಳಿಗೆ ಬಿಡಬಾರದೆಂದು ಮತ್ತು ಒಂದು ವೇಳೆ ಬಿಡಲೇಬೇಕಾದ ಸಂದರ್ಭ ಬಂದರೆ ಚರಂಡಿ ನೀರನ್ನು ಶುದ್ಧೀಕರಣಗೊಳಿಸಿ ಬ ಇಡುವಂತೆ ಮನವಿ ಮಾಡಿದ್ದರು.ಆದರೂ ಎಚ್ಚೆತ್ತುಕೊಳ್ಳದ ಪುರಸಭೆಯವರು ಮಾತ್ರ ನಿತ್ಯ ಚರಂಡಿ ನೀರನ್ನು ಕಾಲುವೆ ಮತ್ತು ನದಿಗೆ ಬಿಡುತ್ತಿದ್ದಾರೆ. ಇದಕ್ಕೆ ಮುಕ್ತಿ ಎಂದು ಎಂದು ಸಾರ್ವಜನಿಕರು ಪ್ರಯತ್ನಿಸುತ್ತಿದ್ದಾರೆ.ಕೋಟ್ಃ- ಪಟ್ಟಣದಲ್ಲಿ ಒಳಚರಂಡಿ ಯೋಜನೆಯ ಬಗ್ಗೆ ಸಮೀಕ್ಷೆ ನಡೆದಿದ್ದು, ಪ್ರಗತಿಯಲ್ಲಿದೆ. ಒಳಚರಂಡಿ ಯೋಜನೆಗೆ ಸಂಬಂಧಿಸಿದಂತೆ ಜಮೀನನ್ನು ಗುರುತಿಸಲಾಗಿದ್ದು,ಒಳಚರಂಡಿ ಕಾಮಗಾರಿಯನ್ನು ಆದಷ್ಟು ಬೇಗ ಆರಂಭಿಸಿ ಚರಂಡಿ ನೀರನ್ನು ಗುರುತಿಸಲಾದ ಜಮೀನಿನಲ್ಲಿ ಸಂಗ್ರಹಿಸಿ ಶುದ್ಧಿಕರಿಸಿ ಪುನಃ ಬಳಕೆಗೆ ಅನುವು ಮಾಡಿಕೊಡಲಾಗುವುದು.ಬಿ.ಮಲ್ಲಿಕಾರ್ಜುನ.ಪ್ರಭಾರ ಮುಖ್ಯಾಧಿಕಾರಿ. ಪುರಸಭೆ ಕಂಪ್ಲಿ.

ವರದಿ : ಜಿಲಾನಸಾಬ್ ಬಡಿಗೇರ್
