ಸಾಮಾಜಿಕ ಮಾಧ್ಯಮಗಳಲ್ಲಿ ‘ವಿಶ್ವಾಸಾರ್ಹತೆ’ ಪ್ರಶ್ನಾರ್ಹ – ಅಶೋಕ್ ನೀಮ್ಕರ್…

ಸಾಮಾಜಿಕ ಮಾಧ್ಯಮಗಳಲ್ಲಿ ‘ವಿಶ್ವಾಸಾರ್ಹತೆ’ ಪ್ರಶ್ನಾರ್ಹ – ಅಶೋಕ್ ನೀಮ್ಕರ್…

ಕನಕಗಿರಿ , ಫೆ.26: ಇಂದಿನ ಇಂಟರ್ನೆಟ್ ಯುಗದಲ್ಲಿ ವರ್ತಮಾನ ಸುದ್ದಿಗಳು ಹಾಗೂ ಮಾಹಿತಿ ಅಂತ ಬಂದಾಗ ಮುಖ್ಯವಾಹಿನಿಯ ಮಾಧ್ಯಮಗಳೇ ಹೆಚ್ಚು ವಿಶ್ವಾಸಾರ್ಹ. ಸಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳನ್ನೆಲ್ಲಾ ಸತ್ಯ ಅಂತ ನಂಬಲು ಆಗುವುದಿಲ್ಲ ಮತ್ತು ಅದರಲ್ಲಿ ಸಿಗುವ ಮಾಹಿತಿಗಳೆಲ್ಲಾ ಸರಿ ಎಂದು ಭಾವಿಸಲೂ ಸಾಧ್ಯವಿಲ್ಲ. ಪ್ರಚಾರಕ್ಕಾಗಿ, ದಾರಿ ತಪ್ಪಿಸುವ ಉದ್ದೇಶದಿಂದ ಅಥವಾ ಬೇರಾವುದೇ ಸ್ವಾರ್ಥಪರ ಉದ್ದೇಶದಿಂದ ಸುಳ್ಳುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಪ್ರವೃತ್ತಿ ಹೆಚ್ಚಿದೆ. ಹಾಗಾಗಿ ಈ ಬಗ್ಗೆ ಎಚ್ಚರವಾಗಿರುವುದು ಅಗತ್ಯ‌ ಎಂದು ಹಿರಿಯ ಪತ್ರಕರ್ತರಾದ ಅಶೋಕ್ ನೀಮ್ಕರ್ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಹಾಗೂ ಪತ್ರಿಕೋದ್ಯಮ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಮುದ್ರಣ ಮಾಧ್ಯಮದಲ್ಲಿ ವೃತ್ತಿ ಅವಕಾಶಗಳು’ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸಮಾಜಿಕ ಮಾಧ್ಯಮಗಳ ಜನಪ್ರೀಯತೆಯಿಂದಾಗಿ ಪತ್ರಿಕೆ, ಟಿವಿ, ರೇಡಿಯೋದಂತಹ ಮುಖ್ಯವಾಹಿನಿಯ ಮಾಧ್ಯಮಗಳು ತಮ್ಮ ಮಹತ್ವ ಕಳೆದುಕೊಳ್ಳುತ್ತಿವೆ ಎಂಬ ಆಲೋಚನೆ ಅನೇಕರಲ್ಲಿದೆ. ಜನ ಹೆಚ್ಚಾಗಿ ಇಂಟರ್ನೆಟ್ ಬಳಸುತ್ತಾರೆ, ಮೊಬೈಲಲ್ಲಿ ಸಿಗುವ ಸುದ್ದಿ-ಮಾಹಿತಿಯನ್ನೇ ಅವಲಂಬಿಸಿದ್ದಾರೆ ಎಂಬ ಭಾವನೆ ಕೂಡ ಇದೆ. ಆದರೆ ಅದರಲ್ಲಿ ಬಂದಿದ್ದೆಲ್ಲವನ್ನೂ ಜನ ನಂಬುತ್ತಾರೆ ಅನ್ನೋದು ಸುಳ್ಳು. ಸತ್ಯವಾದ ಸುದ್ದಿಗಳನ್ನು ಹುಡುಕಲು ಮತ್ತೆ ಅದೇ ಮುಖ್ಯವಾಹಿನಿಗಳ ಮೇಲೆಯೇ ಅವಲಂಬಿಸಿದ್ದಾರೆ, ಸಾಮಾಜಿ ಜಾಲತಾಣಗಳಲ್ಲಿ ಬಂದಿದ್ದರೂ ಕೂಡ ಅದು ಪತ್ರಿಕೆಯಲ್ಲಿ ಪ್ರಕಟವಾಗಿದೆಯೇ? ನ್ಯೂಸ್ ಚಾನೆಲ್ನಲ್ಲಿ ಬಂದಿದೆಯೇ? ಅಂತ ಪರಿಶೀಲಿಸಿಯೇ ಜನ ಸತ್ಯಾಸತ್ಯತೆಯನ್ನು ಅರಿಯುವ ಪ್ರಯತ್ನ ಮಾಡುತ್ತಾರೆ ಎಂದು ಹೇಳಿದರು. ಈ ಹಿಂದೆ ಪತ್ರಿಕೆ, ಟಿವಿ, ರೇಡಿಯೋದಂತಹ ಸಾಂಪ್ರದಾಯಿಕ ಸಮೂಹ ಸಂವಹನಗಳಿಗೆ ಸೀಮಿತವಾಗಿದ್ದ ಮಾಧ್ಯಮ ಕ್ಷೇತ್ರ ಇಂದು ಇಂಟರ್ನೆಟ್ ಪ್ರಗತಿಯ ಕಾರಣಕ್ಕಾಗಿ ಹೆಚ್ಚು ವಿಶಾಲವಾಗಿ ಹರಡಿಕೊಂಡಿದೆ. ಒಟಿಟಿ, ಬ್ಲಾಗಿಂಗ್, ಸ್ಟ್ರೀಮಿಂಗ್, ಪಾಡ್ಕಾಸ್ಟ್ ಸೇರಿದಂತೆ ವಿವಿಧ ಬಗೆಯ ಆನ್ಲೈನ್ ಆಧಾರಿತ ವೇದಿಕೆಗಳನ್ನು ಜನ ಹೆಚ್ಚಾಗಿ ಬಳಸುತ್ತಿರುವುದರಿಂದ ಹೊಸ-ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ. ಗಳಿಕೆಗಾಗಿ ಯಾವುದಾದರೂ ಮಾಧ್ಯಮ ಸಂಸ್ಥೆಗೇ ಕೆಲಸಕ್ಕೆ ಸೇರಬೇಕು ಅಂತ ಇಲ್ಲ, ಪ್ರತಿಭೆ ಜೊತೆಗೆ ಕಲೆ ಹಾಗೂ ಸೃಜನಶೀಲತೆ ಇದ್ದರೆ ಕಂಟೆಟ್ಗಳನ್ನು ಕ್ರಿಯೇಟ್ ಮಾಡಿ ಕೂಡ, ಇದ್ದಲ್ಲೇ ಲಕ್ಷಾಂತರ ರೂಪಾಯಿಗಳನ್ನು ಗಳಿಸಬಹುದು. ಮಾಧ್ಯಮ ವಿದ್ಯಾರ್ಥಿಗಳಿಗೆ ಓದು ಮತ್ತು ಬರಹ ತುಂಬಾ ಮುಖ್ಯ. ಇದರ ಜೊತೆಗೆ ಕೆಲವು ಕೌಶಲ್ಯಗಳನ್ನು ಕಲಿಯುವುದರಿಂದ ಖಂಡಿತ ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿ ಅವಕಾಶಗಳನ್ನು ಪಡೆಯಬಹುದು. ಉತ್ತಮ ಭವಿಷ್ಯಕ್ಕಾಗಿ ಜ್ಞಾನದ ಜೊತೆಗೆ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವ ಕಡೆಗೆ ವಿದ್ಯಾರ್ಥಿಗಳು ಗಮನ ಕೊಡಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಜರಂಗ ಬಲಿ ಮುಖ್ಯ ಅತಿಥಿ ಸ್ಥಾನವನ್ನು ಹಾಗೂ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಲಲಿತಾ.ಎನ್.ಕೆ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಐಕ್ಯೂಎಸಿ ಸಂಚಲಾಕರು ಹಾಗೂ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ರಕ್ಷಿತ್.ಎ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವೀರೇಶ್ ಕೆಂಗಾಲ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಹಲಿಗೆಮ್ಮ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಇಂಗ್ಲೀಷ್ ವಿಭಾಗದ ಬಾಲಪ್ಪ ಕುರಿ ಸ್ವಾಗತಿಸಿದರು, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ವಿಜಯ್ ಸರೋದೆ ಅತಿಥಿ ಪರಿಚಯ ಮಾಡಿಕೊಟ್ಟರು ಮತ್ತು ವಿಭಾಗ ಮುಖ್ಯಸ್ಥರು ಹಾಗೂ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕರೂ ಆದ ಸಂಗಮೇಶ್ ನಿರೂಪಿಸಿದರು. ವಿವಿಧ ವಿಭಾಗಗಳ ಉಪನ್ಯಾಸಕರು ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

*ರಮೇಶ್ ಈಳಿಗರ್ ವಾಲ್ಮೀಕಿ ಅಸ್ತ್ರ ಕನಕಗಿರಿ ತಾಲೂಕ್ ವರದಿಗಾರ ಮೊಬೈಲ್ ನೋ9035332032*

Leave a Reply

Your email address will not be published. Required fields are marked *