ಭಾರತದ ಬಂಜಾರ, ಅಲೆಮಾರಿ- ಬುಡಕಟ್ಟು ಜನರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ ‘ಸೇವಾಸಂತರು – ಸೇವಾಲಾಲ ಮಹಾರಾಜರು : ಪ್ರೊ. ಕರಿಗೂಳಿ…

ಗಂಗಾವತಿ ತಾಲೂಕಿನ ಚಿಲುಕೂರಿ ನಾಗೇಶ್ವರ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶ್ರೀರಾಮನಗರದಲ್ಲಿ ದಿನಾಂಕ. 15-02-2026 ರಂದು ಸಂತ ಸೇವಾಲಾಲ ಮಹಾರಾಜರ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯರಾದ ಪ್ರೊ.ಕರಿಗೂಳಿ ಯವರು ಸೇವಾಸಂತ- ಸೇವಾಲಾಲ ಮಹಾರಾಜರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ನಂತರ ಮಾತನಾಡಿದ ಅವರು ಕರ್ನಾಟಕದ ದಾವಣಗೆರೆ ಜಿಲ್ಲೆಯ ಸುರೆಗೊಂಡನಹಳ್ಳಿಯಲ್ಲಿ ಜನಿಸಿ, ಬಾಲ್ಯದಿಂದಲೇ ಜ್ಞಾನಾಸಕ್ತಿಯನ್ನು ಬೆಳೆಸಿಕೊಂಡಿದ್ದ ಸೇವಾಲಾಲರು ದೇಶಾದ್ಯಾoತ ಸಂಚಾರ ಮಾಡಿ,ಎಲ್ಲಾ ಬುಡಕಟ್ಟು ಜನಾಂಗದವರನ್ನು 18ನೇ ಶತಮಾನದಲ್ಲೇ ಜಾಗೃತಿಗೊಳಿಸಲು ಮುಂದಾಗಿದ್ದ ಮಹನೀಯರು ಎಂದರು. ಅಲೆಮಾರಿ ಬುಡಕಟ್ಟು ಜನಾಂಗದವರನ್ನು ವಿಶೇಷವಾಗಿ ಬಂಜಾರ ಸಮಾಜದವರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿ ತಾಂಡಗಳಲ್ಲಿ ವಾಸಿಸುವಂತೆ ಮಾಡಿದವರು, ಸಂವಿಧಾನ ಭಾರತದಲ್ಲಿoದು ತಾoಡಾಗಳಲ್ಲಿ ದೊರೆಯುವ ನಾಗರೀಕ ಸೌಲಭ್ಯಗಳನ್ನು ಪಡೆಯುತ್ತಿರುವ ಬಂಜಾರ ಸಮುದಾಯದವರು ಡಾ.ಬಾಬಾಸಾಹೇಬರನ್ನು ಎಷ್ಟು ಗೌರವಿಸುತ್ತಾರೋ, ಸೇವಾಲಾಲ ಮಹಾರಾಜರನ್ನು ಅಷ್ಟೇ ಗೌರವಿಸಬೇಕು ಎಂದರು, ಸೇವಾಲಾಲರು ಬಂಜಾರ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ಉಳಿಸಲು ಹಾಗೂ ಕಂದಾಚಾರ, ಮೂಢನಂಬಿಕೆಗಳನ್ನು ಆಚರಿಸದಂತೆ ತಡೆದು, ಸಮುದಾಯವನ್ನು ಆಧ್ಯಾತ್ಮಿಕ, ಧಾರ್ಮಿಕ,ಜ್ಞಾನಪ್ರಜ್ಞೆಯೆಡೆಗೆ ಮುನ್ನಡೆಸಿದವರು, ಹಸಿದವರಿಗೆ ಅನ್ನ ನೀಡಿ, ಬಾಯಾರಿಕೆಯಾದವನಿಗೆ ನೀರು ನೀಡಬೇಕು, ಕ್ರೋಧವನ್ನು ತ್ಯಜಿಸಿ ಬಂಜಾರ ಸಮುದಾಯ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಪ್ರೇರಣೆ ನೀಡಿ, ಮನುಕುಲಕ್ಕೆ ಬೇಕಾದ ಮಾನವೀಯ ಮೌಲ್ಯಗಳನ್ನು ಮುನ್ನೆಲೆಗೆ ತಂದ ಆದರ್ಶ ಸಂತರು ಸೇವಾಲಾಲರು, ಒಬ್ಬ ಕರುನಾಡಿನ ಸಂತ ರಾಷ್ಟ್ರೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಗಣನೀಯ ಸೇವೆ ಕೈಗೊಂಡಿದ್ದು ಶ್ಲಾಘನೀಯ ಎಂದರು.

ಇಂದಿನ ಬಂಜಾರ ಯುವಕರು ಸೇವಾಲಾಲರ ಆಧ್ಯಾತ್ಮಿಕ ಆದರ್ಶಗಳನ್ನು ಮೈಗೂಡಿಸಿಕೊಳ್ಳುತ್ತಾ, ಬಾಬಾಸಾಹೇಬ ಅಂಬೇಡ್ಕರ್ ರವರು ನೀಡಿದ ಸಾoವಿಧಾನಿಕ ಹಕ್ಕುಗಳನ್ನು ಬಳಸಿಕೊಂಡು, ಸುಶಿಕ್ಷಿತರಾಗಿ ಶೋಷಿತರ ಏಕತೆಗೆ ಶ್ರಮಿಸುತ್ತಾ,ಬಹುಸಂಸ್ಕೃತಿಯ ರೂವಾರಿಗಳಾಬೇಕೆಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಸಿಬ್ಬಂದಿಯವರಾದ ಶಾಂತಮ್ಮ ಹಾಗೂ ಚಿನ್ನವರಪ್ರಸಾದ್ ಹಾಜರಿದ್ದರು.

