ಭೀಕರ ಸ್ಫೋಟಕ್ಕೆ ಮನೆಗೆ ಮನೆಯೇ ಸರ್ವನಾಶ!: ಹೊಸ ಸಿಲಿಂಡರ್ ಜೋಡಣೆ ವೇಳೆ ಅವಘಡ….

ಬಳ್ಳಾರಿ : ಜಿಲ್ಲೆಯ ಸಂಡೂರು ತಾಲೂಕಿನ ತಾಳೂರು ಗ್ರಾಮದಲ್ಲಿ ಇಂದು (ಮಾರ್ಚ್ 02, 2026) ಹೊಸ ಅಡುಗೆ ಅನಿಲ ಸಿಲಿಂಡರ್ ಜೋಡಿಸುವಾಗ ಸಂಭವಿಸಿದ ಭೀಕರ ಸ್ಫೋಟಕ್ಕೆ ಮನೆಯೊಂದು ಸಂಪೂರ್ಣವಾಗಿ ನೆಲಸಮವಾಗಿದೆ.
ಸಂಡೂರು ತಾಲೂಕಿನ ತಾಳೂರು ಗ್ರಾಮದ ನಿವಾಸಿ ಸುಬಾನಿ ಸಾಬ್ ಎಂಬುವವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ.
ಮನೆಯಲ್ಲಿ ಹೊಸದಾಗಿ ತಂದಿದ್ದ ಸಿಲಿಂಡರ್ ಅನ್ನು ಅಡುಗೆಗೆ ಜೋಡಿಸುವ ಸಂದರ್ಭದಲ್ಲಿ ಗ್ಯಾಸ್ ಸೋರಿಕೆಯಾಗಿದ್ದು ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ.
ಹಾನಿ: ಸ್ಫೋಟದ ತೀವ್ರತೆಗೆ ಮನೆ ಸಂಪೂರ್ಣವಾಗಿ ಛಿದ್ರಗೊಂಡಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲವೂ ನಾಶವಾಗಿವೆ. ಸ್ಫೋಟದ ರಭಸಕ್ಕೆ ಪಕ್ಕದ ಮನೆಯ ಗೋಡೆಗಳಿಗೂ ಹಾನಿಯಾಗಿದೆ.
ಅದೃಷ್ಟವಶಾತ್, ಗ್ಯಾಸ್ ವಾಸನೆ ಬರುತ್ತಿದ್ದಂತೆಯೇ ಕುಟುಂಬದ ಸದಸ್ಯರು ಮನೆಯಿಂದ ಹೊರಗೆ ಓಡಿ ಬಂದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮನೆ ಮಾಲೀಕ ಸುಬಾನಿ ಸಾಬ್ ಸೇರಿದಂತೆ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ತೋರಣಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
