ಕರ್ನಾಟಕ ರಾಜ್ಯವನ್ನು ಒಗ್ಗೂಡಿಸಿ, ಏಕೀಕರಣಕ್ಕೆ ಶ್ರಮಿಸಿದ ನಾಯಕರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ : ಜೆ.ಎನ್.ಗಣೇಶ.

ಕಂಪ್ಲಿ : ಕರ್ನಾಟಕ ರಾಜ್ಯವನ್ನು ಒಗ್ಗೂಡಿಸಿ, ಏಕೀಕರಣಕ್ಕೆ ಶ್ರಮಿಸಿದ ನಾಯಕರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.ಪಟ್ಟಣದ ವೀರಶೈವ ಸಂಘದ ಆವರಣದಲ್ಲಿ ಕನ್ನಡ ಹಿತರಕ್ಷಕ ಸಂಘದ ಕಂಪ್ಲಿ ತಾಲೂಕು ಘಟಕದಿಂದ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ 70ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಸಂಘದ 55ನೇ ವಾರ್ಷಿಕೋತ್ಸವದ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಮ್ಮ ಭಾಷೆ ನಮ್ಮ ಸಂಸ್ಕೃತಿ ದೇಶದಲ್ಲಿಯೇ ಮಾದರಿಯಾಗಿದೆ. ಹಲವು ಪ್ರದೇಶಗಳ ಜನರು ನಮ್ಮ ಭಾಷೆಯನ್ನು ಅತ್ಯಂತ ಸುಲಭವಾಗಿ ಕಲಿತು ನಮ್ಮಲ್ಲಿ ಬೆರೆತು ಜೀವನ ಸಾಗಿಸುತ್ತಿದ್ದಾರೆ. ಕನ್ನಡ ರಾಜ್ಯ ಒಗ್ಗೂಡಿ ರಾಜ್ಯವಾಗಲು ಅನೇಕ ಮಹನೀಯರು ಶ್ರಮಿಸಿದ್ದಾರೆ. ಅವರೆಲ್ಲರನ್ನು ನೆನಪಿಸಿಕೊಳ್ಳುವ ಕೆಲಸ ಆಗಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಪೋಷಕರು ಮುಂದಾಗಬೇಕು ಎಂದರು.ಸಂಘದ ಅಧ್ಯಕ್ಷ ಬೂದಗುಂಪಿ ಅಂಬಣ್ಣ ಮಾತನಾಡಿ, ಕನ್ನಡದ ಕಂಪು, ವಾತಾವರಣ ಸೃಷ್ಠಿಸುವಂತಹ ಕಾರ್ಯವನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬರಲಾಗಿದೆ. ಕನ್ನಡದ ನೆಲ, ಜಲ, ಭಾಷೆಗೆ ಹೋರಾಟ ಮಾಡುತ್ತಾ ಬರಲಾಗಿದೆ. ಕನ್ನಡದವರು ವಿಶಾಲ ಹೃದಯದವರು. ಆದರೆ, ನಮ್ಮತನವನ್ನು ಬಿಟ್ಟುಕೊಡಬಾರದು. ಕನ್ನಡಕ್ಕಾಗಿ ಇನ್ನಷ್ಟು ಒಗಟ್ಟು, ಒಮ್ಮತ ಅಗತ್ಯವಾಗಿದೆ ಎಂದರು.ಶರಣ ಸಾಹಿತ್ಯ ಪರಿಷತ್ ಬಳ್ಳಾರಿ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಅವರು ಉಪನ್ಯಾಸ ನೀಡಿ ಮಾತನಾಡಿ, ಏಕೀಕರಣ ಹೋರಾಟದಲ್ಲಿ ಹುತಾತ್ಮರಾದ ಪೈಲ್ವಾನ್ ರಂಜಾನ್ ಸಾಬ್ ಬಳ್ಳಾರಿಯವರು. ರಾಜ್ಯದಾದ್ಯಂತ ನಡೆಯುತ್ತಿದ್ದ ಹೋರಾಟಕ್ಕೆ ಮೊದಲ ಜಯ ಸಿಕ್ಕಿದ್ದು ಬಳ್ಳಾರಿಯಲ್ಲೇ. ಇದರಿಂದ ಕನ್ನಡತನವನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ಗೌರವಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಶೈವ ಸಂಘದ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಸಭಾಧ್ಯಕ್ಷತೆವಹಿಸಿದ್ದರು.ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಂಗಭೂಮಿ ಕಲಾವಿದ ಚಿದಾನಂದ ಗವಾಯಿ, ಯೋಗ ಸಾಧಕಿ ಎಸ್.ಪೂಜಾ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಂಗಿ ದೊಡ್ಡ ಮಂಜುನಾಥ, ಬರ‍್ರಕಥಾ ಕಲಾವಿದೆ ಜಂಬಕ್ಕ, ಬಯಲಾಟ ಕಲಾವಿದ ಚನ್ನದಾಸರ ಮಾರೆಪ್ಪ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಜಿಲ್ಲಾ ಕಾರ್ಯದರ್ಶಿ ದ್ಯಾಮನಗೌಡ ಪಾಟೀಲ್, ಜಿಲ್ಲಾ ಕಾರ್ಯಕಾರಣಿ ಸದಸ್ಯ ಜಿ.ಚಂದ್ರಶೇಖರಗೌಡ, ಕ್ರೀಡಾ ಸಾಧಕರಾದ ಜ್ಯೋತಿ, ಶಾಷಾಬಿ, ಮಲ್ಲೇಶ್ವರಿ ಸೇರಿದಂತೆ ಎಸ್ಸೆಸ್ಸೆಲ್ಸಿಯ ಕನ್ನಡ ಹಾಗೂ ಆಂಗ್ಲ ಮಾಧ್ಯಮದ ಕನ್ನಡದಲ್ಲಿ ಶೇ.100ಕ್ಕೆ ನೂರರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆದವು.ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಸಂಘದ ಕಾರ್ಯದರ್ಶಿ ಸಿ.ಯಂಕಪ್ಪ, ಖಜಾಂಚಿ ಶ್ರೀನಿವಾಸ, ಉಪ ಕಾರ್ಯದರ್ಶಿ ಮೆಹಬೂಬ್, ಸದಸ್ಯ ಯಂಕಾರೆಡ್ಡಿ, ಮುಖಂಡರಾದ ಎಸ್.ಡಿ.ಬಸವರಾಜ, ಅಂಬಿಗರ ಮಂಜುನಾಥ, ಬಿ.ನಾರಾಯಣಪ್ಪ, ಕುಕನೂರು ಅಶೋಕ, ಶಾಮ್‌ಸುಂದರ್ ಸೇರಿದಂತೆ ಅನೇಕರಿದ್ದರು.ವರದಿ : ಜಿಲಾನಸಾಬ್ ಬಡಿಗೇರ್
