ಶ್ರೀ ಪೇಟೆ ಬಸವೇಶ್ವರ ಮತ್ತು ನೀಲಮ್ಮದೇವಿ ಜೋಡಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಬಳ್ಳಾರಿ / ಕಂಪ್ಲಿ : ನಗರದ ಆರಾಧ್ಯ ದೈವ ಇತಿಹಾಸ ಪ್ರಸಿದ್ಧ ಶ್ರೀ ಪೇಟೆ ಬಸವೇಶ್ವರ ಮತ್ತು ನೀಲಮ್ಮದೇವಿ ಜೋಡಿ ರಥೋತ್ಸವ ಭಾನುವಾರ ಸಂಜೆ ವಿಜೃಂಭಣೆಯಿಂದ ಜರುಗಿತು. ಪಂಚ ಕಳಶಗಳನ್ನು ಹೊತ್ತು ಅಲಂಕೃತಗೊಂಡಿದ್ದ ಬೃಹತ್ ಜೋಡಿ ರಥಗಳು ಸಂಜೆ ಪಟ್ಟಣದ ಡಾ. ರಾಜ್‌ಕುಮಾರ ಮುಖ್ಯ ರಸ್ತೆ ಮೂಲಕ ಕೂಲಿಕಟ್ಟೆ ಬಸವೇಶ್ವರ, ರಾಮಲಿಂಗೇಶ್ವರ ದೇವಸ್ಥಾನದವರೆಗೆ ಸಾಗಿದವು.ನೆರೆದಿದ್ದ ಸಾವಿರಾರು ಭಕ್ತರು ಎರಡು ತೇರುಗಳು ಸಾಗುವಾಗ ಉತ್ತತ್ತಿ ಎಸೆದು ಮನದ ಹರಕೆ ತೀರಿಸಿದ್ದು, ಈ ಬಾರಿ ಜಾತ್ರೆಯ ವಿಶೇಷವಾಗಿತ್ತು. ಡೊಳ್ಳು, ಕೋಲಾಟ ಕುಣಿತ, ವೀರಗಾಸೆ, ತಾಷಿ ರಾಂಡೋಲು, ಭಜನೆ, ಕಲಾ ಸಂಘಗಳ ನಂದಿಕೋಲು ಕುಣಿತ, ಇನ್ನು ಅನೇಕ ಜನಪದ ವಾದ್ಯದವರು ರಥೋತ್ಸವದಲ್ಲಿ ಭಾಗವಹಿಸಿ ಕಲಾ ನೈಪುಣ್ಯತೆ ಮೆರೆದರು.ಬಳ್ಳಾರಿ, ನೆರೆಯ ಕೊಪ್ಪಳ,ವಿಜಯನಗರ, ರಾಯಚೂರು ಜಿಲ್ಲೆ, ಕಂಪ್ಲಿ ನಗರ ಸೇರಿದಂತೆ ಸುತ್ತಲಿನ 34ಕ್ಕೂ ಹೆಚ್ಚು ಹಳ್ಳಿಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಜಾತ್ರೆಯ ಅಂಗವಾಗಿ ಭಾನುವಾರ ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಸಮ್ಮುಖದಲ್ಲಿ ಶ್ರದ್ಧೆ ಹಾಗೂ ಭಕ್ತಿಯಿಂದ ಜರುಗಿದವು.ಬೆಳಿಗ್ಗೆಯಿಂದಲೇ ಬಸವೇಶ್ವರ ಮತ್ತು ನೀಲಮ್ಮದೇವಿ ದರ್ಶನ ಪಡೆಯಲು ದೇವಸ್ಥಾನದಲ್ಲಿ ಭಕ್ತರು ಸಾಲುಗಟ್ಟಿ ನಿಂತು ಕಾಯಿ ಕರ್ಪೂರ ಮತ್ತು ಕಾಣಿಕೆ ಸಲ್ಲಿಸಿ ಮಂಗಳ ಆರತಿ ಪಡೆಯುತ್ತಿದ್ದ ದೃಶ್ಯ ಕಂಡು ಬಂತು. ಜಾತ್ರೆಯ ಹಿಂದಿನ ದಿನ ರಾತ್ರಿ ಚಳಿ ಲೆಕ್ಕಿಸದೆ ಹೂವಿನ ಅಡ್ಡಪಲ್ಲಕ್ಕಿ ಉತ್ಸವವನ್ನು ಭಕ್ತರೆಲ್ಲರೂ ಭಕ್ತಿ ಭಾವದಿಂದ ಆಚರಿಸಿದರು. ಇದರಲ್ಲಿ ಕಂಪ್ಲಿ ಕ್ಷೇತ್ರದ ಶಾಸಕ ಜೆ. ಎನ್. ಗಣೇಶ್ ಸೇರಿದಂತೆ ದೇವಸ್ಥಾನದ ಪದಾಧಿಕಾರಿಗಳು ಸರ್ವಧರ್ಮದ ಭಕ್ತರು ಪಾಲ್ಗೊಂಡಿದ್ದರು.ಮುಖ್ಯ ರಸ್ತೆ ಸಂಪೂರ್ಣ ಬಂದ್: ರಥೋತ್ಸವದ ಅಂಗವಾಗಿ ಪಟ್ಟಣದ ಡಾ.ರಾಜ್‌ಕುಮಾರ್ ಮುಖ್ಯ ರಸ್ತೆಯಲ್ಲಿ ಬೃಹತ್ ಜಾತ್ರೆ ಪರಸಿ ನಡೆಯುವದರಿಂದ ಸುಮಾರು ಒಂದು ವಾರ ಕಾಲ ಮುಖ್ಯ ರಸ್ತೆ ಸಂಪೂರ್ಣ ಬಂದ್ ಆಗುತ್ತದೆ. ರಸ್ತೆ ಇಕ್ಕೆಲಗಳಲ್ಲಿ ಬಳೆ, ಮಿಠಾಯಿ, ಆಟಿಕೆ- ಸಾಮಾನು ಗಳ ಅಂಗಡಿ ಇತ್ಯಾದಿ ನೂರಾರು ಅಂಗಡಿಗಳು ತಾತ್ಕಾಲಿಕವಾಗಿ ಹಾಕುವುದರಿಂದ ಭರ್ಜರಿ ವ್ಯಾಪಾರ ನಡೆಯಲಿದೆ.
ವರದಿ : ಜಿಲಾನಸಾಬ್ ಬಡಿಗೇರ್
