ಆರೋಗ್ಯಕರ ಸಮಾಜ ಹಾಗೂ ಸದೃಢ ರಾಷ್ಟ್ರನಿರ್ಮಾಣಕ್ಕೆ ಯುವಜನತೆಯ ಕ್ರೀಡಾಸಕ್ತಿ ಪೂರಕ :ಪ್ರೊ. ಕರಿಗೂಳಿ …

ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚoದ್ ರವರ ಜಯಂತಿ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ದಿನಾಂಕ 29.8.2025ರಂದು ಕ್ರೀಡಾ ಪ್ರತಿಜ್ಞಾವಿಧಿಯನ್ನು ಬೋಧಿಸುವುದರ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕರಿಗೂಳಿ ಅವರು ಮಾತನಾಡುತ್ತಾ ಮೇಜರ್ ಧ್ಯಾನ್ ಚoದ್ ರವರ ಕ್ರೀಡಾ ಸಾಧನೆಯನ್ನು ವಿವರಿಸುತ್ತಾ ಯುವಕರು ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಹವನ್ನು ಸದೃಢವಾಗಿ ಮಾಡಿಕೊಳ್ಳಬೇಕು, ಇದು ಸದೃಢ ದೇಶವನ್ನು ನಿರ್ಮಾಣ ಮಾಡುವಲ್ಲಿ ಪೂರಕ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಮುಂದುವರೆದು ಯುವಜನತೆ ಈ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಕ್ರೀಡೆಗಳನ್ನು ಬದಿಗೊತ್ತಿ ಮೊಬೈಲ್ ಬಳಕೆಗೆ ದಾಸರಾಗಿ ಆನ್ಲೈನ್ ಆಟಗಳಲ್ಲಿ ಮೈಮರೆತು ಸಮಯ ಮತ್ತು ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ. ಅಲ್ಲದೇ ಆನ್ಲೈನ್ ಗೇಮ್ಗಳಲ್ಲಿ ಹಣ ಕಳೆದುಕೊಂಡು ಕುಟುಂಬಗಳನ್ನು ಸಾಲಕ್ಕೆ ದೂಡುತ್ತಿದೆ. ಹಾಗಾಗಿ ಯುವಜನತೆ ಕ್ರೀಡೆಗಳಲ್ಲಿ ಪಾಲ್ಗೊಂಡು ದೇಹ ಸದೃಢವಾಗಿಟ್ಟುಕೊಳ್ಳುವ ಅವಕಾಶ ಕೈಚೆಲ್ಲಿ ಆನ್ಲೈನ್ ಜೂಜಿನ ಮೋಜಿಗೆ ಬಿದ್ದು ಸಾಲದ ಬಾಧೆಯಿಂದ ವ್ಯಸನಕ್ಕೆ ಗುರಿಯಾಗಿ ಮಾದಕ ವಸ್ತುಗಳ ಸೇವನೆಗೆ ಮುಂದಾಗುತ್ತಿರುವುದು ಕಂಡುಬರುತ್ತಿದೆ. ಆದ್ದರಿಂದ ಇಂತಹ ವ್ಯಸನಗಳಿಂದ ಹೊರಬರಲು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಸಹವರ್ತಿಗಳಲ್ಲಿ ಸಹೋದರತ್ವ ಭಾವನೆಯನ್ನು ಹೆಚ್ಚಿಸಿ ಸಮಾಜದಲ್ಲಿ ಸಾಮರಸ್ಯವನ್ನು ಮೂಡಿಸುವ ಪೂರಕವಾದ ವಾತವರಣವನ್ನು ಒದಗಿಸುತ್ತದೆ ಎಂದು ಕಾಲೇಜಿನ ವಿದ್ಯಾರ್ಥಿಗಳನ್ನು ಎಚ್ಚರಿಸಿದರು. ಇದು ದೇಶದ ಐಕ್ಯತೆಗೆ ಇಂದಿನ ಅಗತ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಸಹಾಯಕ ಪ್ರಾಧ್ಯಾಪಕರಾದ ಶಂಕ್ರಪ್ಪ ಎಂ. ಅವರು ರಾಷ್ಟ್ರೀಯ ಕ್ರೀಡಾ ದಿನ ಮತ್ತು ಧ್ಯಾನ್ಚಂದ್ ಅವರ ಸಾಧನೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು.

ಈ ಸಂದರ್ಭದಲ್ಲಿ ಸಹ ಪ್ರಾಧ‍್ಯಾಪಕರಾದ ಸರಫರಾಜ್ ಅಹ್ಮದ್, ಐಕ್ಯೂಎಸಿ ಸಂಚಾಲಕರಾದ ರವಿಕುಮಾರ, ಸಹಾಯಕ ಪ್ರಾಧ್ಯಾಪಕರಾದ ವೀರೇಶ, ವಿರುಪಾಕ್ಷ ಕೆ. ಆಡಳಿತ ಸಿಬ್ಬಂದಿಯಾದ ಜಬೀನಾ ಬೇಗಂ, ವಿನಾಯಕ, ಚಿನ್ನ ವರಪ್ರಸಾದ್, ಶರಣ ಮತ್ತು ಶಾಂತಿ ಹಾಗೂ ಕಾಲೇಜಿನ ಹಾಜರಿದ್ದರು. ಈ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳು ಕ್ರೀಡಾಸ್ಪೂರ್ತಿಯಿಂದ ತಮ್ಮ ಕ್ರೀಡಾ ಸಾಮಾಗ್ರಿಗಳೊಂದಿಗೆ ಉತ್ಸುಕತೆಯಿಂದ ಪಾಲ್ಗೊಂಡರು.
