ಬುಕ್ಕಸಾಗರದಲ್ಲಿ ಲಿಂಗೈಕ್ಯ ಬಾಲತಪಸ್ವಿ ಕರಿಸಿದ್ದೇಶ್ವರ ಶಿವಾಚಾರ್ಯರ ವಿಜೃಂಭಣೆಯ ಮಹಾರಥೋತ್ಸವ.

ಕಂಪ್ಲಿ: ಸಮೀಪದ ಬುಕ್ಕಸಾಗರ ಗ್ರಾಮದ ದಕ್ಷಿಣಕಾಶಿ ಕರಿಸಿದ್ದೇಶ್ವರ ಸಂಸ್ಥಾನದ ಮಠದಲ್ಲಿ ಬಾಲ ತಪಸ್ವಿ ಲಿಂಗೈಕ್ಯ ಷ.ಬ್ರ.ಕರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಮಹಾರಥೋತ್ಸವವು ಅತ್ಯಂತ ಸಡಗರ,ಸಂಭ್ರಮ,ಶ್ರದ್ಧೆ, ಭಕ್ತಧಿಳಿಂದ ವಿಜೃಂಭಣೆಯಿಂದ ಶನಿವಾರ ಸಂಜೆ ಜರುಗಿತು.ಲಿಂಗೈಕ್ಯ ಕರಿಸಿದ್ದೇಶ್ವರ ಶಿವಾಚಾರ್ಯರ ಲಿಂಗಾಂಗ ಸಾಮರಸ್ಯದ 13ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಕಳೆದ 7 ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪುರಾಣ, ಅಧ್ಯಾತ್ಮಿಕ ಪ್ರವಚನಗಳು, ಸಂಗೀತ, ವಚನ ಸಂಗೀತ, ಹಾಸ್ಯ ಸಂಜೆ, ಭರತನಾಟ್ಯ ವಿಶೇಷವಾಗಿ ವೀರಭದ್ರೇಶ್ವರರ ಗಂಗೆಸ್ಥಳ ಮತ್ತು ಅಗ್ನಿಕುಂಡ ಹಾಯುವ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನಡೆದವು.ಬೆಳಿಗ್ಗೆ ಮಹಾರಥೋತ್ಸವದ ಅಂಗವಾಗಿ ಕರಿಸಿದ್ಧಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ, ಸಾಮೂಹಿಕ ವಿವಾಹ, ಧಾರ್ಮಿಕ ಸಭೆ ಹಾಗೂ ಮಡಿ ತೇರು ಜರುಗಿದವು. ನಂತರ ಅನ್ನಸಂತರ್ಪಣೆ ನಡೆಯಿತು. ಸಂಜೆ ವಿವಿಧ ಮಠಾಧೀಶರು, ಸ್ವಾಮಿಗಳ ಸಮ್ಮುಖದಲ್ಲಿ ಸಾವಿರಾರು ಸದ್ಭಕ್ತರು ಜಯ ಘೋಷದ ನಡುವೆ ವಿವಿಧ ಜಾನದಪ ಕಲಾತಂಡಗಳ ಪ್ರದರ್ಶನದೊಂದಿಗೆ ಮಹಾರಥೋತ್ಸವವು ಅದ್ದೂರಿಯಿಂದ ನಡೆಯಿತು. ಮಹಾರಥೋತ್ಸವದಲ್ಲಿ ಜಿಲ್ಲೆ,ಹೊರ ಜಿಲ್ಲೆ, ರಾಜ್ಯಗಳ ಸಾವಿರಾರು ಸದ್ಭಕ್ತರು ಭಾಗವಹಸಿದ್ದರು. ರಾತ್ರಿ ಖ್ಯಾತ ಸಂಗೀತಗಾರರಾದ ರಾಮಸಾಗರ ಸರ್ಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕರಾದ ರಾರಾವಿಯ ಚಿದಾನಂದ ಗವಾಯಿಗಳ ನಿರ್ದೇಶನದಲ್ಲಿ ಶ್ರೀ ಕರಿಸಿದ್ದೇಶ್ವರ ಸಂಸ್ಕೃತ,ವೇದ,ಜ್ಯೋತಿಷ್ಯ ಗುರುಕುಲ ಪಾಠಶಾಲೆ ವಿದ್ಯಾರ್ಥಿಗಳಿಂದ ನಾರದ ವಿನೋದ ಮತ್ತು ಮುದುಕನ ಮದುವೆ ನಾಟಕಗಳು ಪ್ರದರ್ಶನಗೊಂಡವು.

ವರದಿ : ಜಿಲಾನಸಾಬ್ ಬಡಿಗೇರ್
