ಕ್ಯಾಬಿನೆಟ್ ವಿಸ್ತರಣೆ: ಸಹೋದರನಿಗೆ ಮಂತ್ರಿಗಿರಿ ನೀಡಲು ಪಟ್ಟು ಹಿಡಿದ ಸಂಸದ ರಾಜಶೇಖರ್ ಹಿಟ್ನಾಳ….

ಗಂಗಾವತಿ :ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ ನಿರೀಕ್ಷೆಗಳು ಗರಿಗೆದರುತ್ತಿದ್ದಂತೆಯೇ, ಆಕಾಂಕ್ಷಿಗಳು ಮಂತ್ರಿಗಿರಿಗೆ ‘ಟವೆಲ್’ ಹಾಕಲು ಆರಂಭಿಸಿದ್ದಾರೆ. ಒಂದು ವೇಳೆ ಕ್ಯಾಬಿನೆಟ್ ವಿಸ್ತರಣೆಯಾದರೆ ತಮ್ಮ ಸಹೋದರ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಸಂಸದ ರಾಜಶೇಖರ್ ಹಿಟ್ನಾಳ್ ಪಟ್ಟು ಹಿಡಿದಿದ್ದಾರೆ.ನಗರದಲ್ಲಿ ಶನಿವಾರ (ಫೆ.28) ಈ ಬಗ್ಗೆ ಮಾತನಾಡಿದ ಅವರು, ತಮ್ಮ ಸಹೋದರನ ಪರವಾಗಿ ಬಹಿರಂಗವಾಗಿಯೇ ಬ್ಯಾಟ್ ಬೀಸಿದ್ದಾರೆ. “ರಾಜ್ಯದಲ್ಲಿ ಸಂಪುಟ ವಿಸ್ತರಣೆಯಾದರೆ ರಾಘವೇಂದ್ರ ಹಿಟ್ನಾಳ್‌ಗೆ ಸಚಿವ ಸ್ಥಾನ ಕೊಡಿ ಎಂದು ಸರ್ಕಾರ ಹಾಗೂ ಹೈಕಮಾಂಡ್ ಮುಂದೆ ಖಂಡಿತವಾಗಿ ಬೇಡಿಕೆ ಇಡುತ್ತೇವೆ” ಎಂದು ಸಂಸದರು ಸ್ಪಷ್ಟಪಡಿಸಿದ್ದಾರೆ.ಮೂರು ಬಾರಿ ಗೆದ್ದವರಿಗೆ ಮಣೆ ಹಾಕಲಿ:ಕೆಲವು ಹೊಸಬರು ಸಚಿವ ಸ್ಥಾನಕ್ಕೆ ಲಾಬಿ ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂಸದ ರಾಜಶೇಖರ್ ಹಿಟ್ನಾಳ್, “ನಿನ್ನೆ ಮೊನ್ನೆ ಬಂದವರು, ಅಂದರೆ ಒಮ್ಮೆ ಮಾತ್ರ ಶಾಸಕರಾದವರು ಕೂಡ ಸರ್ಕಾರದಲ್ಲಿ ಸಚಿವ ಸ್ಥಾನ ಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ. ಹೀಗಿರುವಾಗ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರಾಘವೇಂದ್ರ ಹಿಟ್ನಾಳ್ ಅವರಿಗೆ ಏಕೆ ಸಚಿವ ಸ್ಥಾನ ನೀಡಬಾರದು?” ಎಂದು ಹೈಕಮಾಂಡ್ ಅನ್ನು ಪ್ರಶ್ನಿಸಿದ್ದಾರೆ. ಈ ಬಾರಿಯ ವಿಸ್ತರಣೆಯಲ್ಲಿ ಖಂಡಿತವಾಗಿಯೂ ತಮ್ಮ ಸಹೋದರನಿಗೆ ಸ್ಥಾನ ಪಡೆಯಲು ಪಟ್ಟು ಹಿಡಿಯುವುದಾಗಿ ಅವರು ತಿಳಿಸಿದರು.ಹಾಲಿ, ಮಾಜಿ ಸಚಿವರಿಗೆ ಪರೋಕ್ಷ ಟಾಂಗ್:ಕೊಪ್ಪಳ ಜಿಲ್ಲಾ ರಾಜಕೀಯದ ಲೆಕ್ಕಾಚಾರಗಳ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ ಹಿಟ್ನಾಳ್, “ಜಿಲ್ಲೆಯಲ್ಲಿ ಎಷ್ಟು ಜನರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬುದು ನಮಗೆ ಮುಖ್ಯವಲ್ಲ. ನಮ್ಮಲ್ಲಿರುವ ಗುಣಾತ್ಮಕ ಅಂಶಗಳ (ಅರ್ಹತೆಯ) ಆಧಾರದ ಮೇಲೆ ನಾವು ಬೇಡಿಕೆ ಇಡುತ್ತೇವೆ” ಎಂದರು.ಸಂಸದರ ಈ ಹೇಳಿಕೆಯು, ಜಿಲ್ಲೆಯ ಹಾಲಿ ಸಚಿವ ಶಿವರಾಜ್ ತಂಗಡಗಿ ಹಾಗೂ ಮಂತ್ರಿಗಿರಿಯ ತೀವ್ರ ನಿರೀಕ್ಷೆಯಲ್ಲಿರುವ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ನೀಡಿದ ಪರೋಕ್ಷ ಸಂದೇಶ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.ಒಟ್ಟಿನಲ್ಲಿ, ಸಂಪುಟ ವಿಸ್ತರಣೆಗೂ ಮುನ್ನವೇ ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಪಾಳಯದಲ್ಲಿ ಮಂತ್ರಿಗಿರಿಗಾಗಿನ ಹಗ್ಗಜಗ್ಗಾಟ ಬಹಿರಂಗವಾಗಿಯೇ ಆರಂಭವಾಗಿದೆ.
