ದೀಪಾವಳಿ ಸಂಭ್ರಮ : ಪಾಂಡವರ ಸ್ಮರಣಾರ್ಥ ಎಮ್ಮೆಗಳಿಗೆ ಅಲಂಕಾರ : ಅದ್ಧೂರಿ ಮೆರವಣಿಗೆ…

ದೀಪಾವಳಿ ಸಂಭ್ರಮ : ಪಾಂಡವರ ಸ್ಮರಣಾರ್ಥ ಎಮ್ಮೆಗಳಿಗೆ ಅಲಂಕಾರ : ಅದ್ಧೂರಿ ಮೆರವಣಿಗೆ…

ಕಂಪ್ಲಿ : ದೀಪಾವಳಿ ಹಬ್ಬ ಬಂತೆಂದರೆ ಸಾಕು ತಾಲ್ಲೂಕಿನ ನಂ.10 ಮುದ್ದಾಪುರ ಗ್ರಾಮದ ಗೌಳೇರು ಓಣಿಯಲ್ಲಿ ವಿಶಿಷ್ಟ ಸಂಭ್ರಮ ಮನೆ ಮಾಡುತ್ತದೆ. ದೀಪಾವಳಿ ಹಬ್ಬದಲ್ಲಿ ಗೌಳೇರು ಸಮುದಾಯದವರು ತಾವು ಸಾಕುತ್ತಿರುವ ಹಾಗೂ ತಮ್ಮ ಆರ್ಥಿಕ ಮೂಲವಾದ ಎಮ್ಮೆಗಳನ್ನು ಶೃಂಗರಿಸಿ ಮೆರವಣಿಗೆ ಮಾಡಿ ದೇವಸ್ಥಾನ ಮತ್ತು ಪಾಂಡವರಿಗೆ ಚೆಲ್ಲು ಹೊಡೆಸುವ (ಮನೆಯ ಮುಂದೆ, ಗೋದಲಿಯಲ್ಲಿ ಅಲಂಕಾರ ಮಾಡಿರುವ ದೇವರ ಮುಂದೆ ಎಮ್ಮೆಗಳಿಂದ ಬಾಗಿ ನಮಸ್ಕರಿಸುವ) ವಿಶಿಷ್ಟ ಆಚರಣೆ ನಿರಂತರವಾಗಿ ನಡೆಸುತ್ತಾ ಬಂದಿದ್ದಾರೆ. ದೀಪಾವಳಿ ಪಾಡ್ಯದಂದು ಎಮ್ಮೆಗಳನ್ನು ಶೃಂಗರಿಸಿ ಚೆಲ್ಲು ಹೊಡೆಸುವ ಮತ್ತು ಎಮ್ಮೆಗಳ ವಿಶಿಷ್ಟ ಮೆರವಣಿಗೆ ಈ ಗ್ರಾಮದಲ್ಲಿ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡುತ್ತಾರೆ.ನಂ.10 ಮುದ್ದಾಪುರ ಗ್ರಾಮದ ಗೌಳೇರು ಓಣಿಯಲ್ಲಿ ದೀಪಾವಳಿ ಪಾಡ್ಯದಂದು ವಿಶೇಷ ಸಂಭ್ರಮದ ಮನೆ ಮಾಡಿದ್ದು, ಅಂದು ಗ್ರಾಮದ ಅ.22 ರಂದು ಬಸವೇಶ್ವರ ದೇವಸ್ಥಾನದಿಂದ ಎಮ್ಮೆಗಳ ಮೆರವಣಿಗೆ ಆರಂಭಗೊAಡು ಗ್ರಾಮದ ಮುಖ್ಯ ರಸ್ತೆಗಳ ಮೂಲಕ ಸಾಗಿ ಗ್ರಾಮದ ದೇವತೆ ಮಾರೆಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ಎಮ್ಮೆಗಳ ಕೊಟ್ಟಿಗೆಯಲ್ಲಿ ಎಂದಿನಂತೆ ಕಟ್ಟಿ ಹಾಕುತ್ತಾರೆ. ಎಮ್ಮೆಗಳ ಮೆರವಣಿಗೆಯಲ್ಲಿ ದೇವಸ್ಥಾನಗಳ ಮುಂದೆ, ಮನೆ ಮುಂದೆ ಇಟ್ಟ ಪಾಂಡವರಿಗೆ ಎಮ್ಮೆಗಳು ಚೆಲ್ಲು ಹೊಡೆದು ಸಂಪ್ರದಾಯ ಮೆರೆಯುತ್ತವೆ. ಎಮ್ಮೆಗಳಿಗೆ ಅಂದು ಚೆನ್ನಾಗಿ ಸ್ನಾನ ಮಾಡಿಸಿ ಕೊಂಬುಗಳಿಗೆ ವಿವಿಧ ಬಣ್ಣಗಳನ್ನು ಬಳಿಯುವುದರ ಜೊತೆಗೆ ಅವುಗಳ ದೇವಹಕ್ಕೂ ಬಣ್ಣವನ್ನು ಬಳಿದು ವಿವಿಧ ಹೂಗಳಿಂದ ಅಲಂಕರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡುತ್ತಾರೆ.ಹನ್ನೊಂದು ವರ್ಷ ವನವಾಸ, ಒಂದು ವರ್ಷ ಅಜ್ಞಾತವಾಸ ಯಶಸ್ವಿಯಾಗಿ ಪೂರೈಸಿ ಬಂದ ಪಾಂಡವರ ಸ್ಮರಣಾರ್ಥ ದೀಪಾವಳಿ ಪಾಡ್ಯದಂದು ಮನೆಗಳ ಮುಂದೆ ಪಾಂಡವರನ್ನು ಮಾಡಿಟ್ಟು ಪೂಜಿಸುವ ಸಂಪ್ರದಾಯವಿದೆ. ಮನೆಯ ದ್ವಾರಗಳ ಇಕ್ಕೆಲಗಳಲ್ಲಿ ಆಕಳ ಸೆಗಣಿಯಿಂದ ಚೌಕಕಾರದ ವೇದಿಕೆ ಮೇಲೆ ಪಾಂಡವರನ್ನು ಪ್ರತಿನಿಧಿಸಿದಂತೆ ಐದು ಉದ್ದನೆಯ ಸೆಗಣಿಯ ಕುಪ್ಪೆಗಳನ್ನು ಮಾಡಿ ಅದಕ್ಕೆ ಉತ್ತರಾಣಿ ಕಡ್ಡಿ, ವನಾಂಬರಿ ಹೂ ಹಾಕಿ ಪೂಜಿಸಲಾಗುತ್ತದೆ. ಪಾಂಡವರು ವನವಾಸದಲ್ಲಿ ದನಕರುಗಳನ್ನು ಕಾಯುವ ಹಾಗೂ ಮೊಸರು ಕಡೆಯುವ ಪ್ರತೀಕವಾಗಿ ಪಾಂಡರವನ್ನು ಸೆಗಣಿಯಿಂದ ತಯಾರಿಸಿ ಪ್ರತಿಷ್ಠಾಪಿಸುತ್ತಾರೆ. ಶ್ಯಾವಿಗೆ ಸೇರಿದಂತೆ ಇತರೆ ಸಿಹಿ ಪದಾರ್ಥಗಳನ್ನು ನೈವೇದ್ಯ ಮಾಡುತ್ತಾರೆ.ಹೆಣ್ಣು ಮಕ್ಕಳು ಕಳಸದಾರತಿ ಬೆಳಗಿ ಪೂಜಿಸುತ್ತಾರೆ. ನಂತರ ಎಮ್ಮೆಗಳನ್ನು ಪಾಂಡವರ ಎದುರಿಗೆ ಚೆಲ್ಲು (ಬಾಗಿ ನಮಸ್ಕರಿಸುವ) ಹೊಡೆಸುವ ಸಂಪ್ರದಾಯವನ್ನು ಪಾಲಿಸುತ್ತಾರೆ. ಮನೆಗಳ ಎಲ್ಲಾ ಕೋನೆಗಳಲ್ಲಿ ಪಾಂಡವರು ಆಗಮಿಸುವ ನಿರೀಕ್ಷೆಯಲ್ಲಿ ವನಂಬಾರಿ (ಅಂಬ್ರೆ ಹೂ ಅಥವಾ ಹಳದಿ ಹೂ) ಹೂಗಳನ್ನು ಎರಚುತ್ತಾರೆ. ಕಂಪ್ಲಿ ಪಟ್ಟಣವೂ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಹಿಂದೂ ಸಂಪ್ರದಾಯಸ್ಥರು ತಮ್ಮ ಮನೆಗಳ ಅಂಗಳದಲ್ಲಿ ಆಕಳ ಸೆಗಣಿಯಿಂದ ಮಾಡಿದ ಪಾಂಡವರನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ.ಎಮ್ಮೆಗಳು ಗೌಳೇರು ಸಮುದಾಯದ ಆರ್ಥಿಕ ಸಂಪತ್ತಿನಂತೆ ಮನೆಯಲ್ಲಿ ಹಾಲು, ಮೊಸರು, ಬೆಣ್ಣೆ ಮತ್ತು ತುಪ್ಪ ಸಮೃದ್ಧವಾಗಿರಲು ಪ್ರಾರ್ಥಿಸುತ್ತಾರೆ. ಎಮ್ಮೆ ಕರುಗಳ ಸಂತಿ ಅಧಿಕವಾಗುವಂತೆ, ಜಾನುವಾರುಗಳು ರೋಗ ರುಜಿನದಿಂದ ಬಳಲದಂತೆ ಕೋರಿ ಪಾಂಡವರನ್ನು ಪೂಜಿಸುವ ಮತ್ತು ಮೆರವಣಿಗೆ ಮಾಡುವ ಸಂಪ್ರದಾಯವಿದೆ ಎಂದು ನಂ.10 ಮುದ್ದಾಪುರ ಗ್ರಾಮದ ಗೌಳೇರು ಸಮುದಾಯದ ಹಿರಿಯರು ತಿಳಿಸಿದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *