ಸರ್ವ ಧರ್ಮ, ಸಮುದಾಯದ ಸ್ನೇಹಜೀವಿ, ರಂಗಭೂಮಿ ಕಲಾವಿದ ಬೂದಗುಂಪಿ ಹುಸೇನ್ ಸಾಬ್ ಇನ್ನಿಲ್ಲ….

ಬಳ್ಳಾರಿ/ ಕಂಪ್ಲಿ : ರಂಗಭೂಮಿ ಕಲಾವಿದ, ಹಾಸ್ಯ ನಟ, ಖ್ಯಾತ ಅಣುಕುಗಾರ(ಮಿಮಿಕ್ರಿ), ಖಳನಾಯಕ, ಕಟು ವಿಮರ್ಶಕ, ಕಾಂಗ್ರೆಸ್ ಪಕ್ಷದ ವಕ್ತಾರ, ಕನ್ನಡ ಹಿತರಕ್ಷಕ ಸಂಘದ ಉಪಾಧ್ಯಕ್ಷ, ಪ್ರಶ್ನಾತೀತ ನಾಯಕ ಕಂಪ್ಲಿಯ ಬೂದಗುಂಪಿ ಹುಸೇನ್ ಸಾಹೇಬ್ ದಿನಾಂಕ 18-11-2025 ಮಂಗಳವಾರ ಬೆಳಗಿನ ಜಾವ ತಮ್ಮ ಪಾತ್ರ ಮುಗಿಸಿ, ಬಣ್ಣ ಕಳಚಿ ತೆರೆ ಮರೆಯ ಸೇರಿದರು.ರೈತ ನಗಲಿಲ್ಲ ಸರ್ಕಾರ ಉಳಿಯಲಿಲ್ಲ, ಶ್ರೀವೀರಬ್ರಹ್ಮೇಂದ್ರಸ್ವಾಮಿ ಚರಿತ್ರೆ, ರಕ್ತ ರಾತ್ರಿ ಸೇರಿ ನಾನಾ ನಾಟಕಗಳಲ್ಲಿ ನಾಯಕನಟನಾಗಿ, ಖಳ ನಾಯಕನಾಗಿ, ಹಾಸ್ಯ ಪಾತ್ರದಾರಿಯಾಗಿ, ಪೋಷಕ ಪಾತ್ರಧಾರಿಯಾಗಿ ಕಲಾಸೇವೆ ನಿರ್ವಹಿಸಿದ್ದರು. ಮುಸ್ಲಿಮ್ ಸಮುದಾಯದ ಪ್ರಮುಖರಾಗಿದ್ದರೂ ಹುಸೇನ್ ಸಾಹೇಬ್ ಸರ್ವ ಧರ್ಮ, ಸಮುದಾಯದವರೊಂದಿಗೆ ಸ್ನೇಹ ಹೊಂದಿದ್ದರು.ಬಳ್ಳಾರಿ ಬಸಪ್ಪ ಅವರ ನಾಯಕ ನಟನೆಯ ‘ರೈತ ನಗಲಿಲ್ಲ ಸರ್ಕಾರ ಉಳಿಯಲಿಲ್ಲ’ ಸಾಮಾಜಿಕ ನಾಟಕದಲ್ಲಿ ಖಳ ನಾಯಕನಾಗಿ ನಟಿಸಿ ಮಿಂಚಿ ಹೆಸರಾಗಿದ್ದರು.ಖಳನಟ ವಜ್ರಮುನಿ ಇವರಿಂದ ರಂಗಭೂಮಿಯ ರಾಜ್ಯಮಟ್ಟದ ಉತ್ತಮ ಕಲಾವಿದ ಎನ್ನುವ ಪ್ರಶಸ್ತಿ ಗಳಿಸಿದ್ದು ಇವರ ಹೆಗ್ಗಳಿಕೆಯಾಗಿದೆ. ಹೊಸಪೇಟೆಯ ಸಂಗೀತ ಭಾರತಿ ಸಂಸ್ಥೆಯ ರಂಗ ಭಾರ್ಗವ ಪ್ರಶಸ್ತಿ, ಸಮಾಜ ಸೇವಾ ಭಾರ್ಗವ ಪ್ರಶಸ್ತಿಗಳನ್ನು ಎಚ್.ಪಿ.ಕಲ್ಲಂಭಟ್ಟರಿಂದ ಪಡೆದಿದ್ದರು.ಹುಸೇನ್ ಸಾಹೇಬ್ ಅವರ ಪ್ರಮುಖ ಆಕರ್ಷಣೆ ಮಾತು ಮತ್ತು ಮಿಮಿಕ್ರಿ. ಸಿನಿಮಾ ನಟರಾದ ಡಾ.ರಾಜಕುಮಾರ್, ಬಾಲಕೃಷ್ಣ, ವಜ್ರಮುನಿ ಸೇರಿ ಕನ್ನಡ, ಹಿಂದಿ, ತೆಲುಗು ಚಲನಚಿತ್ರನಟರು, ಮಾಜಿ ಸಿಎಂ ಬಂಗಾರಪ್ಪ, ರಾಜಕಾರಣಿಗಳಾದ ಮಲ್ಲಿಕಾರ್ಜುನ ಖರ್ಗೆ, ಎಂ.ಪಿ.ಪ್ರಕಾಶ ಸೇರಿ ಅನೇಕರು ಹಾಗೂ ಸ್ಥಳೀಕರಾದ ಅರವಿ ಬಸವನಗೌಡ, ಕೆ.ಎಂ.ಹೇಮಯ್ಯಸ್ವಾಮಿ ಸೇರಿ ಸ್ನೇಹಿತರ, ಒಡನಾಡಿಗಳ ಮಾತುಗಳನ್ನು ಥೇಟ್ ಅನುಕರಣೆ ಮಾಡಿ ತೋರಿಸುವ ಮೂಲಕ ಎಲ್ಲರನ್ನ ನಕ್ಕು ನಗಿಸಿ ಅಲ್ಲಿ ಹೊಸ ಕಳೆ ಸೃಷ್ಟಿಸುತ್ತಿದ್ದರು. ಸಭೆ ಸಮಾರಂಭಗಳಲ್ಲಿ ಸ್ವಾಗತ, ವಂದನೆ, ಪರಿಚಯ ಹಾಗೂ ನಿರೂಪಣೆಯನ್ನು ವಿಶೇಷ ಶೈಲಿಯಲ್ಲಿ ಪ್ರಸ್ತುತಪಡಿಸುತ್ತಿದ್ದರು.ಕನ್ನಡ ಹಿತರಕ್ಷಕ ಸಂಘದಲ್ಲಿ ಉಪಾಧ್ಯಕ್ಷರಾಗಿ, ನಿರ್ದೇಶಕರಾಗಿ ಬಹು ವರ್ಷಗಳ ದೀರ್ಘ ಸೇವೆ ಸಲ್ಲಿಸಿದ್ದಾರೆ. ಸದ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ನಾನಾ ಸಂಘಟನೆಗಳಲ್ಲೂ ಸೇವೆ ಸಲ್ಲಿಸಿದ್ದುಂಟು.ಸದಾ ಒಂದಿಲ್ಲೊಂದು ಚಟುವಟಿಕೆಗಳ ಮೂಲಕ ಜನರ ಮುಂದೆ ನಿಲ್ಲ ಬಯಸುತ್ತಿದ್ದ ಹುಸೇನ್ ಸಾಹೇಬ್ ಕಟು ವಿಮರ್ಶಕರಾಗುದ್ದಿರು. ಯಾರನ್ನೂ ಬಿಡದೆ ಖಂಡಾತುಂಡಾಗಿ ಅವರ ಅನುಪಸ್ಥಿತಿಯಲ್ಲಿ ಖಂಡಿಸದೆ ಬಿಡುತ್ತಿರಲಿಲ್ಲ. ಅವರು ಜನಸಾಮಾನ್ಯರೇ ಆಗಿರಬಹುದು, ರಾಜಕಾರಣಿಗಳೇ ಆಗಿರಬಹುದು. ವಿಶೇಷವೆಂದರೇ ಹುಸೇನ್ ಸಾಹೇಬ್ ಕಣ್ಣಿಗೆ ಬಿದ್ದವರ ಪಾಲಿಗೆ ಹೊಗಳಿಕೆ ಹಾಗೂ ತೆಗಳಿಕೆಯ ಸ್ತುತಿ ಖಂಡಿತಾ ಪಡೆದಿರುತ್ತಾರೆ ಎಂಬುದು ಸುಳ್ಳಲ್ಲ.ಈಗ ಹುಸೇನ್ ಸಾಹೇನ್ ನೆನಪಷ್ಟೇ. ಬದುಕೆಂಬ ರಂಗನೆಲೆಯಲ್ಲಿನ ಪಾತ್ರ ಮುಗಿಸಿದ್ದರೂ ಅವರ ನಟನೆ ಕಣ್ಮುಂದೆ ನಿಲ್ಲುತ್ತೆ. ಒಂದು ತಲೆಮಾರಿನ ರಂಗಭೂಮಿಯ ಕೊಂಡಿ ಕಳಚಿದಂತಾಗಿದೆ.ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ.ವರದಿ : ಜಿಲಾನಸಾಬ್ ಬಡಿಗೇರ್
