ಸಮಸ್ಯೆ ಇತ್ಯಾರ್ಥವಾಗುವವರೆಗೂ ಸೇತುವೆ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹ.

ಬಳ್ಳಾರಿ / ಕಂಪ್ಲಿ : ಪಟ್ಟಣದ ಗಂಗಾವತಿ ರಸ್ತೆಯಲ್ಲಿರುವ ಪುರಾತನ ದೇವಾಲಯವಾದ ಸಿದ್ಧಿ ವಿನಾಯಕ ದೇವಸ್ಥಾನ ಮುಂಭಾಗದಲ್ಲಿರುವ ಸೇತುವೆ ಕಾಮಗಾರಿಯನ್ನು ದೇವಾಲಯಕ್ಕೆ ದಕ್ಕೆಯಾಗದ ರೀತಿಯಲ್ಲಿ ನಿರ್ಮಿಸಬೇಕೆಂದು ಆಗ್ರಹಿಸಿ, ವರಸಿದ್ಧಿ ವಿನಾಯಕ ದೇವಸ್ಥಾನ ಸಮಿತಿ ಹಾಗೂ ನೀರು ಬಳಕೆದಾರರ ಸಹಕಾರ ಸಂಘ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಸಂಘ-ಸಂಸ್ಥೆಯವರು ಇಲ್ಲಿನ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಲೋಕೋಪಯೋಗಿ ಇಲಾಖೆಯ ಜೆಇ ಆನಂದ್ಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು. ನಂತರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ಇಲ್ಲಿನ ಬೆನಕಲ ಕಾಲುವೆ ಎಂಬುವುದು ವಿಜಯನಗರ ಕಾಲದ ಕಾಲುವೆಯಾಗಿರುವ ಜೊತೆಗೆ ಇಲ್ಲಿನ ದೇವಸ್ಥಾನಕ್ಕೆ ತನ್ನದೇ ಆದ ಇತಿಹಾಸವಿದೆ. ಆದರೆ, ಕಾಮಗಾರಿ ನೆಪದಲ್ಲಿ ದೇವಸ್ಥಾನ ಮಾಯ ಮಾಡುವ ಹುನ್ನಾರ ಮಾಡುತ್ತಿರುವುದು ಶೋಭೆಯಲ್ಲ. ಬೆನಕನ ಕಾಲುವೆಯ ಸೇತುವೆ ಅಗಲೀಕರಣವನ್ನು ಕೂಡಲೇ ಸ್ಥಗಿತಗೊಳಿಸಬೇಕು. ಇಲ್ಲಿನ ದೇವಸ್ಥಾನದ ಮುಂಭಾಗದಲ್ಲಿ 10 ಅಡಿ ಜಾಗ ಬಿಟ್ಟು, ಸೇತುವೆ ನಿರ್ಮಿಸಬೇಕು. ದೇವಸ್ಥಾನದ ಎದುರುಗಡೆಯ ಕಾಲುವೆ ಜಾಗವು ಸರ್ಕಾರದ್ದಾಗಿದ್ದು ಆ ಕಡೆಗೆ ಸೇತುವೆ ಕಾಮಗಾರಿ ವಿಸ್ತರಿಸಬೇಕು. ಇಲ್ಲಿನ ಸಮಸ್ಯೆ ಇತ್ಯಾರ್ಥವಾಗುವರೆಗೂ ಸೇತುವೆ ಕಾಮಗಾರಿ ಮಾಡಬಾರದು. ಒಂದು ವೇಳೆ ಕಾಮಗಾರಿ ಮುಂದುವರೆಸಿದ್ದಲ್ಲಿ ಮುಂದಿನ ಹೋರಾಟದ ರೂಪುರೇಷ ದೊಡ್ಡಮಟ್ಟದಲ್ಲಿರುತ್ತದೆ. ಆದ್ದರಿಂದ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ, ಇಲ್ಲಿನ ಸಮಸ್ಯೆಗೆ ಮುಕ್ತಿ ನೀಡಿ, ಕಾಮಗಾರಿ ಆರಂಭಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪಿಐ ಕೆ.ಬಿ.ವಾಸುಕುಮಾರ, ದೇವಸ್ಥಾನ ಸಮಿತಿಯ ಅಧ್ಯಕ್ಷ ಕಾಮಗಂಡಿ ಗವಿಸಿದ್ದಪ್ಪ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ತಿಮ್ಮಪ್ಪನಾಯಕ, ಮುಖಂಡರಾದ ಎನ್.ಎಂ.ಪತ್ರೆಯ್ಯಸ್ವಾಮಿ, ಪುಟ್ಟಿ ಸಚಿನ್, ಕೊಟ್ಟೂರು ರಮೇಶ, ಹೆಚ್.ಶಶಿಧರ್, ವೀರಾಂಜಿನೀಯಲು, ಸುರೇಶ, ಶ್ರೀನಿವಾಸ ಸೇರಿದಂತೆ ಅನೇಕರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್
